ಹೊಸದಿಗಂತ ವರದಿ, ಬಳ್ಳಾರಿ:
ಕೋವಿಡ್-19 ಸೊಂಕಿನ ಅರ್ಭಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಗೆ ಮೂವರ ಯುವಕರ ತಂಡ ಕಪಾಳ ಮೋಕ್ಷ ಮಾಡಿದ ಘಟನೆ ನಗರದ ಕಣೇಕಲ್ ಬಸ್ ನಿಲ್ದಾಣದ ಬಳಿ ಶುಕ್ರವಾರ ನಡೆದಿದೆ.
ನಗರದ ರಾಣಿತೋಟ ನಿವಾಸಿಗಳಾದ ಅಲ್ತಾಫ್, ಉಸ್ಮಾನ್, ಮಹ್ಮದ್ ಹುಸೇನ್ ಮೂವರು ಆರೋಪಿಗಳು ಎಂದು ಗುರುತಿಸಲಾಗಿದೆ. ಇವರಲ್ಲಿ ಉಸ್ಮಾನ್ ಹಾಗೂ ಮಹ್ಮದ್ ಹುಸೇನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ತಾಫ್ ಎನ್ನುವವರು ಪರಾರಿಯಾಗಿದ್ದು, ಇವನ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರ ವಿರುದ್ದ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಿಕರ ಆಕ್ರೋಶ: ಹೆಮ್ಮಾರಿ ಕೋವಿಡ್-19 ಸೊಂಕಿನ ಅರ್ಭಟ ತಗ್ಗಿಸಲು, ಜನರ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದು, ಹೀಗಿರುವಾಗ ಕರ್ತವ್ಯ ನಿರತ ಪೊಲೀಸ್ ಪೇದೆಯೋಬ್ಬರು ಮೂವರ ಯುವಕರನ್ನು ತಡೆದು ಮಾಸ್ಕ್ ಹಾಕಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಕ್ಕೆ ಕಪಾಳ ಮೋಕ್ಷ ಮಾಡಿರುವುದು ಎಷ್ಟರ ಮಟ್ಟಿಗೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾಮಾರಿ ಕೊರೋನಾ ಸೊಂಕು ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದ್ದು, ನಿತ್ಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನೂರಾರು ಪ್ರಕರಣಗಳು ಪತ್ತೆಯಾಗುತ್ತಿವೆ. ಜನರ ಸುರಕ್ಷತೆಗೆ ಹಾಗೂ ಸೊಂಕಿನ ಅರ್ಭಟಕ್ಕೆ ಬ್ರೇಕ್ ಹಾಕಲು ಮುಂದಾದ ಕರ್ತವ್ಯ ನಿರತ ಸಿಬ್ಬಂದಿ , ಯಾಕೆ ಮಾಸ್ಕ್ ಹಾಕಿಲ್ಲ? ಪ್ರತಿಯೋಬ್ಬರೂ ಮಾಸ್ಕ್ ಧರಿಸಬೇಕು ಎನ್ನುವ ನಿಯಮವಿದೆ. ನಿಮಗೂ ಸುರಕ್ಷಿತ ಹಾಗೂ ಜನರಿಗೂ ಸುರಕ್ಷೆ ಎಂದು ಮೂವರ ಯುವಕರನ್ನು ತಡೆದು ಹೇಳಿದ್ದಾರೆ. ಈ ಬಳಿಕ ಯುವಕರು ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ, ಕೂಡಲೇ ಇಲಾಖೆಯ ಮೇಲಾಧಿಕಾರಿಗಳು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.