ಸೊಳ್ಳೆಗಳ ಸೇಡು: ಐಶಾರಾಮಿ ಫ್ಲಾಟ್‌ ದೋಚಿದ ಕಳ್ಳ ಸೊಳ್ಳೆಗಳಿಂದ ಸಿಕ್ಕಿಬಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಚೀನಾದ ಪೊಲೀಸರು ಕುತೂಹಲಕಾರಿ ರೀತಿಯಲ್ಲಿ ಕಳ್ಳನೋರ್ವನನ್ನು ಹಿಡಿದಿದ್ದಾರೆ. ಫುಜಿಯಾನ್ ಪ್ರಾಂತ್ಯದ ಫುಝೌನಲ್ಲಿ ಕಳ್ಳನೊಬ್ಬ ಯಾರೂ ಇಲ್ಲದ ಸಮಯ ನೋಡಿ ಬಾಲ್ಕನಿಯಿಂದ ಐಶಾರಾಮಿ ಫ್ಲಾಟ್‌ ನೊಳಕ್ಕೆ ನುಗ್ಗಿ ಹಲವಾರು ಬೆಲೆಬಾಳುವ ವಸ್ತುಗಳನ್ನು ಕದ್ದ. ಆ ಬಳಿಕವೂ ಯಾಕೋ ಆತನಿಗೆ ಆ ಫ್ಲಾಟ್‌ ಬಿಟ್ಟುಹೋಗಲು ಮನಸಾಗಲಿಲ್ಲ.
ಸೀದಾ ಅಡುಗೆಮನೆಗೆ ಹೋಗಿ ನೂಡಲ್ಸ್  ಮಾಡಿಕೊಂಡು ತಿಂದು ಆ ಮನೆಯಲ್ಲಿಯೇ ರಾತ್ರಿ ಕಳೆದ. ಮರುದಿನ ಬೆಳಗ್ಗೆ ಪೊಲೀಸರು ಬಂದು ನೋಡಿದಾಗ ಒಳಗಿನಿಂದ ಬಾಗಿಲು ಮುಚ್ಚಿದ್ದು, ಕಳ್ಳ ನುಗ್ಗಿರುವುದು ಕಂಡು ಬಂದಿದೆ. ತನಿಖೆ ಆರಂಭಿಸಿದ ಪೊಲೀಸರಿಗೆ ಎರಡು ಸೊಳ್ಳೆಗಳು ಕಳ್ಳನ ಕುರಿತಾಗಿ ಸುಳಿವು ನೀಡಿವೆ. ಆಗಿದ್ದಿಷ್ಟೇ..
ಕಳ್ಳ ರಾತ್ರಿ ಆ ಫ್ಲಾಟ್‌ ನಲ್ಲಿ ಉಳಿದುಕೊಂಡಿದ್ದಾಗ ಸೊಳ್ಳೆಗಳು ತೊಂದರೆ ನೀಡಿವೆ. ಅವುಗಳು ಅವನಿಗೆ ಕಚ್ಚಿ ಗೋಡೆಯ ಮೇಲೆ ಕುಳಿತಿದ್ದಾಗ ಫಟ್‌ ಎಂದು ಬಾರಿಸಿ ಅವುಗಳನ್ನು ಸಾಯಿಸಿದ್ದ. ಈ ಸತ್ತ ಸೊಳ್ಳೆಗಳನ್ನು ನೋಡಿದ ಪೊಲೀಸರು ಅವುಗಳ  ಡಿಎನ್ಎ ಪರೀಕ್ಷೆ  ಮೂಲಕ ಕಳ್ಳನನ್ನು ಪತ್ತೆ ಹಚ್ಚಿದ್ದಾರೆ.  ಡಿಎನ್‌ಎ ಮಾದರಿಗಳು ಕ್ರಿಮಿನಲ್ ದಾಖಲೆ ಹೊಂದಿರುವ ಚೈ ಎಂಬ ಉಪನಾಮ ಹೊಂದಿರುವ ಶಂಕಿತ ವ್ಯಕ್ತಿಗೆ ಸೇರಿದವು ಎಂದು ಪೊಲೀಸರು ಖಚಿತಪಡಿಸಿದ್ದು, ಅಪರಾಧ ಎಸಗಿದ 19 ದಿನಗಳ ನಂತರ ಕಳ್ಳನನ್ನು ಬಂಧಿಸಲಾಗಿದೆ.
ಈ ಸುದ್ದಿಯು ಚೀನೀ ಸಾಮಾಜಿಕ ಮಾಧ್ಯಮಗಳಲ್ಲಿ ವಿನೋದಕ್ಕೆ ಕಾರಣವಾಗಿದೆ. ಕೆಲವರು ಇದು ಸೊಳ್ಳೆಗಳ ಸೇಡುʼ ಎಂದರೆ, ಮತ್ತೆ ಕೆಲವರು  ಕಳ್ಳ ಮನೆ ನುಗ್ಗುವಷ್ಟು ಬುದ್ದಿವಂತನಿರಬಹುದು, ಆದರೆ, ಸೊಳ್ಳೆಗಳು ನಿಷ್ಪ್ರಯೋಜಕವೆಂದು ಭಾವಿಸಿದ್ದು  ಆತನ ತಪ್ಪು,”  ಎಂದು ಕಾಲೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!