Saturday, August 13, 2022

Latest Posts

ಕೋವಿಡ್ ಸೋಂಕಿಗೆ ಮೃತಪಟ್ಟವರ ಸಾಲ ಮನ್ನ ಮಾಡಿದ ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಸಹಕಾರ ಸಂಘ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಶ್ರೀಮಂಗಲ:

ಸಾಲ ಪಡೆದು ಕೋವಿಡ್  ಸೋಂಕಿಗೆ ತುತ್ತಾಗಿ ಮೃತಪಟ್ಟ ಮೂವರು ಮತ್ತು ಹೃದಯಾಘಾತ ಮತ್ತಿತರ ಕಾರಣಗಳಿಂದ ಅಕಾಲಿಕ ಮರಣ ಹೊಂದಿದ  ಐವರು  ಸದಸ್ಯರ 2.57 ಲಕ್ಷ ರೂ. ಸಾಲವನ್ನು ಮನ್ನಾ ಮಾಡುವ ಮೂಲಕ ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಸಹಕಾರ ಸಂಘ ಜಿಲ್ಲೆಯ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಸಂಘದ ಅಧ್ಯಕ್ಷ ಮದ್ರೀರ ಕೆ.ಸೋಮಯ್ಯ ಹೆಮ್ಮೆ ವ್ಯಕ್ತಪಡಿಸಿದರು.

ವಿವಿಧ ಕಾರಣಗಳಿಂದ ಆಕಸ್ಮಿಕ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ಸಾಂತ್ವನ ನಿಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಾಲ ಮನ್ನಾ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪೊನ್ನಂಪೇಟೆಯ ಸಂಘದ ಸಭಾಂಗಣದಲ್ಲಿ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ 19 ಸೋಂಕಿಗೆ ತುತ್ತಾಗಿ ಮೃತಪಟ್ಟ ಮೂವರು ಸದಸ್ಯರ 1.09 ಲಕ್ಷ ರೂ. ಹಾಗೂ ಇತರ ಕಾರಣಗಳಿಂದ ಮೃತಪಟ್ಟ ಐದು ಸದಸ್ಯರ 1.48 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲಾಗಿದೆ. ಮನ್ನಾ ಮಾಡಿರುವ ಸಾಲದಲ್ಲಿ ಪಿಗ್ಮಿ ಸಾಲ ಸೇರಿದಂತೆ ಇತರ ಸಾಲವೂ ಸೇರಿದ್ದು, ಸಾಲ ಪಡೆದ ಸದಸ್ಯ ಮೃತಪಟ್ಟ ನಂತರ ಆ ಸಾಲದ ಹೊರೆ ಅವರ ಕುಟುಂಬಕ್ಕೆ ಹಾಗೂ ಜಾಮೀನು ನೀಡಿದವರಿಗೆ ಆಗದಂತೆ ಸಾಲ ಪಡೆಯುವಾಗ ಕ್ಷೇಮಾಭಿವೃದ್ದಿ ನಿಧಿಗೆ ಕಟ್ಟಿಸಿಕೊಳ್ಳುವ ಪಾಲು ಹಣದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಅರ್ಥವ್ಯವಸ್ಥೆಯನ್ನು ಸುಧಾರಣೆ ಮಾಡಲು ಹಾಗೂ ನಿಯಂತ್ರಣಕ್ಕೆ ತರಲು ರಾಜ್ಯಗಳ ಸುಪರ್ದಿಯಲ್ಲಿದ್ದ ಸಹಕಾರಿ ರಂಗದಲ್ಲಿ ಆಗುತ್ತಿರುವ ಆರ್ಥಿಕ ವ್ಯವಹಾರಗಳನ್ನು ನಿಯಂತ್ರಿಸಿ ಸರಿದಾರಿಗೆ ತರಲು ಸಹಕಾರಿ ಕ್ಷೇತ್ರವನ್ನು ಕೇಂದ್ರದ ಸುಪರ್ದಿಗೆ ತೆಗೆದುಕೊಂಡು ಸಹಕಾರ ಇಲಾಖೆಯನ್ನು ಸ್ಥಾಪಿಸಿ ಇದರ ಜವಾಬ್ದಾರಿಯನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ವಹಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಗ್ಗುತ್ತಪ್ಪ ಸಹಕಾರ ಸಂಘ ಕಳೆದ 13 ವರ್ಷಗಳಿಂದ ಎಲ್ಲಾ ವಿಭಾಗಗಳು ಪ್ರಗತಿ ತೋರಿಸಿದಂತೆ ಈ ವರ್ಷವೂ ಸಹ ಪ್ರಗತಿ ಪಥದಲ್ಲಿ ಮುನ್ನಡೆದಿದ್ದು, ರೂ. 17.49 ಲಕ್ಷ ನಿವ್ವಳ ಲಾಭ ಪಡೆದಿದೆ. ಈ ಬಗ್ಗೆ ಸೆಪ್ಟೆಂಬರ್ 5 ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ  ಸಂಪೂರ್ಣ ವಿವರಣೆಯನ್ನು ಸದಸ್ಯರಿಗೆ ನೀಡಲಾಗುವುದು ಎಂದು ತಿಳಿಸಿದರು.

ಸಾಲ ಪಡೆದು ಅಕಾಲಿಕ ಮರಣಪಟ್ಟ ಸದಸ್ಯರಿಗೆ ಕಳೆದ ವರ್ಷ ಗರಿಷ್ಠ 60 ಸಾವಿರ ರೂ. ಹಾಗೂ ಪ್ರಸಕ್ತ ವರ್ಷ 75 ಸಾವಿರ ರೂ. ಕ್ಷೇಮಾಭಿವೃದ್ಧಿ ನಿಧಿಯಿಂದ ಸಾಲ ಮನ್ನಾ ಮಾಡಲು ಅವಕಾಶ ಇರುತ್ತದೆ. ಇದರ ಮೂಲಕ ಈಗಾಗಲೇ 2.57 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೊನ್ನಂಪೇಟೆ ವಿಭಾಗದ ಮೂವರು ಆಶಾ ಕಾರ್ಯಕರ್ತರನ್ನು  ಸನ್ಮಾನಿಸಿ ಗೌರವಧನವನ್ನು ಸಂಘದಿಂದ ನೀಡಲಾಗಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಡೇಮಾಡ ಭೀಮಯ್ಯ, ನಿರ್ದೇಶಕರಾದ ಗುಮ್ಮಟ್ಟೀರ ಗಂಗಮ್ಮ, ಮಾಣಿಪಂಡ ಪಾರ್ವತಿ, ಚಿರಿಯಪಂಡ ಕಾಶಿಯಪ್ಪ, ಕಳ್ಳಿಚಂಡ ಡಾಲಿ ಕುಶಾಲಪ್ಪ, ಅರಮಣಮಾಡ ಬೋಪಯ್ಯ, ಐನಂಡ ಮಂದಣ್ಣ, ಕಳ್ಳಿಚಂಡ ಕಟ್ಟಿ ಪೂಣಚ್ಚ, ಮುದ್ದಿಯಡ ಪ್ರಕಾಶ್, ಕಬ್ಬಚ್ಚೀರ ಚಿದಂಬರ, ಕೂಕಂಡ ರಾಜ ಕಾವೇರಪ್ಪ, ಕೋದೆಂಗಡ ಎಸ್. ಸುರೇಶ್, ಕುಲ್ಲಚಂಡ ಪ್ರಭು ನಂಜಪ್ಪ ಹಾಗೂ ಸಿ.ಇ.ಓ ಮದ್ರೀರ ಗಣಪತಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss