Sunday, August 14, 2022

Latest Posts

ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ: ಸಂಸದ ಪ್ರತಾಪ್‍ಸಿಂಹ ಎಚ್ಚರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಡಿಕೇರಿ :

ಮಳೆಗಾಲ ಆರಂಭವಾಗಿರುವುದರಿಂದ ರಸ್ತೆಯ ದುರಸ್ತಿ ಕಾರ್ಯಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಜಿಲ್ಲೆಯ ರಸ್ತೆಗಳ ಡಾಮರೀಕರಣಕ್ಕೆ ಸಂಬಂಧಿಸಿದಂತೆ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮವಹಿಸಬೇಕು ಎಂದು ಸಂಸದ ಪ್ರತಾಪ್‍ಸಿಂಹ ಸೂಚನೆ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಕುಶಾಲನಗರದ ತಾವರೆಕೆರೆ ಬಳಿ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿತವಾಗುವುದರಿಂದ 4.5 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಯೋಜನೆ ರೂಪಿಸಿ ಸಮಸ್ಯೆ ಪರಿಹಾರ ಕಲ್ಪಿಸಲಾಗುತ್ತಿದೆ. ಈ ಸಂಬಂಧ ಈಗಾಗಲೇ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಮೈಸೂರು-ಬಂಟ್ವಾಳ ರಸ್ತೆ 275 ರಲ್ಲಿ ಆಗಾಗ ಭೂಕುಸಿತ ಸಂಭವಿಸುತ್ತಿರುವುದರಿಂದ ಶಾಶ್ವತವಾಗಿ ತಡೆಗೋಡೆ ನಿರ್ಮಿಸುವ ಸಂಬಂಧ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್‍ಗೆ ಸಂಸದರು ಸೂಚನೆ ನೀಡಿದರು.
ಮಳೆಗಾಲ ಆರಂಭವಾಗಿರುವುದರಿಂದ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‍ಗಳು ಹಾಳಾಗುವ ಸಂಭವವಿದ್ದು, ಅವುಗಳನ್ನು ತಕ್ಷಣವೇ ಬದಲಾವಣೆ ಮಾಡಲು ಕ್ರಮವಹಿಸಬೇಕು ಎಂದು ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆಗಳಿಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಹಾಗೂ ಈಗಾಗಲೇ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿರುವ ಮನೆಗಳಿಗೆ ಶೀಘ್ರವೇ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಅರಣ್ಯ ವ್ಯಾಪ್ತಿಯಲ್ಲಿರುವ ಆದಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲನೆ ನಡೆಸಿ ಅರಣ್ಯ ಹಕ್ಕು ಪತ್ರ ವಿತರಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಶನಿವಾರಸಂತೆಯ ದುಂಡಳ್ಳಿ ಗ್ರಾಮದಲ್ಲಿ ರಸ್ತೆ ಡಾಮರೀಕರಣ ಕಳಪೆಯಾಗಿದೆ ಎಂದು ದೂರು ಬಂದರೂ ಸಹ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯ ಮಾಡಿದರು. ಆಲೂರು ಸಿದ್ದಾಪುರ ರಸ್ತೆ ಕಾಮಗಾರಿ ಇನ್ನೂ ಮುಕ್ತಾಯವಗದಿರುವ ಬಗ್ಗೆ ಅವರು ಸಭೆಯ ಗಮನಕ್ಕೆ ತಂದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಮಾತನಾಡಿ, ಮಡಿಕೇರಿ ನಗರದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಪಡೆಯದೆ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದು, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಅವರು ಮಾತನಾಡಿ ಜಲ ಜೀವನ್ ಮಿಷನ್ ಯೋಜನೆಯಡಿ ಈ ಸಾಲಿನಲ್ಲಿ 53 ಸಾವಿರ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದ್ದು, ಈಗಾಗಲೇ 35 ಸಾವಿರ ಮನೆಗಳಿಗೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿ, ಜಿಲ್ಲೆಯಲ್ಲಿ 6,981 ವಿದ್ಯಾರ್ಥಿಗಳು 41 ಕೇಂದ್ರಗಳಲ್ಲಿನ 659 ಕೊಠಡಿಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಈ ಸಂಬಂಧ 1,200 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್ ಅವರು ಮಂಜಾಟ್ ಕಾಲೋನಿಯಲ್ಲಿ ಒಟ್ಟು 11 ಅರ್ಜಿಗಳು ಪುನರ್ ಪರಿಶೀಲನೆಯಲ್ಲಿ ತಿರಸ್ಕರಿಸಲಾಗಿದ್ದು, ಆ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಇತ್ಯರ್ಥ ಪಡಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಅನುಮೋದನೆಗೊಂಡ ನಂತರ ಅರಣ್ಯ ಹಕ್ಕು ಪತ್ರ ವಿತರಿಸಲು ಹಾಗೂ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 167 ಹಾಡಿಗಳಿದ್ದು, ಅರಣ್ಯ ಹಕ್ಕು ಕಾಯ್ದೆಯಡಿ ಒಟ್ಟು 2,826 ಪರಿಶಿಷ್ಟ ಪಂಗಡ, 1184 ಒ.ಟಿ.ಎಫ್.ಡಿ ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1762 ಪರಿಶಿಷ್ಟ ಪಂಗಡ ಅರ್ಜಿಗಳನ್ನು ಮಾನ್ಯ ಮಾಡಿ ಅರಣ್ಯ ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss