ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗಲು ಪಾಸಿಟಿವ್ ವರದಿ ಕಡ್ಡಾಯವಲ್ಲ. ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ ಸಂಬಂಧ ರಾಷ್ಟ್ರೀಯ ನೀತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕರಿಸಿದೆ. ಈ ಹೊಸ ನೀತಿಯ ಅನ್ವಯ ಕೋವಿಡ್ 19ಗೆ ಸಂಬಂಧಪಟ್ಟ ಯಾವುದೇ ಆರೋಗ್ಯ ಕೇಂದ್ರಗಳಿಗೆ ಪ್ರವೇಶ ಪಡೆಯಲು ಕೋವಿಡ್ ಪಾಸಿಟಿವ್ ವರದಿ ಕಡ್ಡಾಯವಲ್ಲ ಎಂದು ತಿಳಿಸಿದೆ.
ಈ ಮೊದಲು ಪಾಸಿಟಿವ್ ಬಂದ ನಂತರ ಸೋಂಕಿತರು ಕೋವಿಡ್ ಕೇರ್ ಸೆಂಟರ್(ಸಿಸಿಸಿ), ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ಸ್(ಡಿಸಿಎಚ್ಸಿ) ಮತ್ತು ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್ಸ್(ಡಿಸಿಎಚ್)ಗೆ ಸೇರ್ಪಡೆಯಾಗಿ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಈಗ ಪರಿಷ್ಕರಣೆಗೊಂಡ ನೀತಿಯ ಅನ್ವಯ, ಕೋವಿಡ್ ಲಕ್ಷಣಗಳು ಕಂಡುಬಂದರೆ ಸಾಕು ಈ ಮೂರರಲ್ಲಿ ಯಾವುದೇ ಕೇಂದ್ರಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಇದರ ಜೊತೆಗೆ ಹೊಸ ಅಂಶಗಳನ್ನು ಸೇರಿಸಲಾಗಿದ್ದು, ಇನ್ನು ಸ್ಥಳೀಯರಿಗೆ ಮಾತ್ರ ಚಿಕಿತ್ಸೆ ಕೊಡುತ್ತೇವೆ. ಬೇರೆ ನಗರ, ಜಿಲ್ಲೆಗಳವರಿಗೆ ಚಿಕಿತ್ಸೆ ಕೊಡುವುದಿಲ್ಲ ಎಂದು ಹೇಳುವಂತಿಲ್ಲ. ಇಷ್ಟು ದಿನ ಆಯಾ ಕೇಂದ್ರಗಳಿಗೆ ನಿಗದಿ ಮಾಡಿದ್ದ ವ್ಯಾಪ್ತಿ ಇನ್ನು ಮುಂದೆ ಅನ್ವಯವಾಗುವುದಿಲ್ಲ ಎಂದು ಪರಿಷ್ಕರಣ ರಾಷ್ಟ್ರೀಯ ನೀತಿಯಲ್ಲಿ ಉಲ್ಲೇಖವಾಗಿದೆ.