ತಾಕತ್ತಿದ್ದರೆ ಕಾಂಗ್ರೆಸ್‌ನವರು ಲಿಂಗಾಯತ ನಾಯಕನನ್ನು ಸಿಎಂ ಮಾಡಲಿ: ಜೋಶಿ ಸವಾಲ್

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲಿಂಗಾಯತರ ಮೇಲೆ ಈಗ ಇಷ್ಟೊಂದು ಪ್ರೀತಿ ಬಂದಿದೆ. ಹಾಗಾದರೆ, ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸವಾಲ್‌ ಎಸೆದರು. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ಕಾಂಗ್ರೆಸ್ ಹಿಂದೆ‌ ಲಿಂಗಾಯತರನ್ನು ಒಡೆಯಲು ಹೋಗಿ ಅಧಿಕಾರ ಕಳೆದುಕೊಂಡಿತ್ತು. ಲಿಂಗಾಯತರಿಗೆ ದ್ರೋಹ ಮಾಡಿದ್ದು ಕಾಂಗ್ರೆಸ್. ಬಿಜೆಪಿ, ಲಿಂಗಾಯತರು ಅಷ್ಟೇ ಅಲ್ಲದೆ ಎಲ್ಲ ಸಮಾಜದವರಿಗೆ ಗೌರವ ನೀಡುತ್ತ ಬಂದಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಕ್ಕೆ ಇನ್ನೂ ಕ್ಷಮೆ ಯಾಚಿಸಿಲ್ಲ. ಈಗಲೂ ಅವರು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈಗಲಾದರೂ ಲಿಂಗಾಯತರಿಗೆ ಕ್ಷಮೆ ಕೊರಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಲಿಂಗಾಯತ ಸಿಎಂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ನೇತೃತ್ವದಲ್ಲಿ ಚುನಾವಣೆ ಮಾಡಲಿದ್ದೇವೆ. ಚುನಾವಣೆ ಬಳಿಕ ಸಿಎಂ ಯಾರೆಂಬುದು ಘೋಷಣೆಯಾಗಲಿದೆ.

ಹು-ಧಾ ಸೆಂಟ್ರಲ್ ಮತ ಕ್ಷೇತ್ರದ ಅಷ್ಟೇ ಅಲ್ಲ ಎಲ್ಲ ಕ್ಷೇತ್ರಗಳ ಗೆಲ್ಲುವ ಗುರಿ ಪಕ್ಷ ಹೊಂದಿದೆ. ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸ್ವತಃ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಆಯ್ಕೆ ಮಾಡಿದ್ದಾರೆ. ಶೆಟ್ಟರ್‌ಗೆ ಉತ್ತಮ ಸ್ಥಾನ ನೀಡುವುದಾಗಿ ತಿಳಿಸಿದರೂ ಸಹ ಅವರು ಪಕ್ಷ ತೊರೆದಿದ್ದಾರೆ.

ರಾಹುಲ್ ಗಾಂಧಿ ಅವರು ಈ ಬಾರಿ ಬಿಜೆಪಿಗೆ ಆಪರೇಷನ್ ಮಾಡಲು ಬಿಡುವುದಿಲ್ಲ ಎಂದಿದ್ದು ಸರಿಯಾಗಿದೆ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!