ಅಯೋಧ್ಯಾ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ 2024ಕ್ಕೆ ಪೂರ್ಣ: ವಿಶ್ವಪ್ರಸನ್ನ ಶ್ರೀ

ಹೊಸದಿಗಂತ ವರದಿ, ಮಂಗಳೂರು:
ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024ರ ಜನವರಿಯಲ್ಲಿ ಮಂದಿರದ ಪ್ರತಿಷ್ಠಾ ಕಾರ್ಯ ನೆರವೇರಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಲ್ಲವೂ ನಿಗದಿತ ಸಮಯದಲ್ಲೇ ನೆರವೇರುತ್ತಿದೆ. ಮೊದಲ ಕೆಲಸವಾದ ಭೂಮಿ ದೃಢಗೊಳಿಸುವ ಕಾರ್ಯ ಆಗಿದೆ. ಅದರ ಮೇಲೆ ಈಗ ಫ್ಲ್ಯಾಟ್‌ಫಾರ್ಮ್ ರಚನೆ ಕೊನೆಯ ಹಂತದಲ್ಲಿದೆ. ಕರ್ನಾಟಕದಿಂದ ಕೊಂಡೊಯ್ದಿರುವ ಶಿಲೆಗಳಿಂದಲೇ ಫ್ಲ್ಯಾಟ್‌ಫಾರ್ಮ್ ನಿರ್ಮಾಣ ಆಗಿದೆ. ಗರ್ಭಗುಡಿಯ ಶಿಲಾನ್ಯಾಸ ಜೂನ್ 1ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವು ಅಯೋಧ್ಯೆಗೆ ತೆರಳಲಿದ್ದೇವೆ ಎಂದರು.
ವಾರಣಾಸಿಯ ಜ್ಞಾನವಾಪಿ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯ ಬಗ್ಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಶಿವಲಿಂಗ ಕಂಡುಬಂದದ್ದು ಸಂತಸದ ವಿಚಾರ. ನಮ್ಮ ಈ ತನಕದ ನಂಬಿಕೆಗಳು, ಪುರಾಣಗಳ ಉಲ್ಲೇಖಗಳು ಸತ್ಯ ಎಂಬುದು ಸಾಬೀತಾಗುತ್ತಿದೆ. ಹಾಗಾಗಿ ಇದನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ಮಾತ್ರವಲ್ಲ, ಇಂತಹ ಅತಿಕ್ರಮಗಳೆಲ್ಲವೂ ಬೇಗನೆ ದೂರವಾಗಿ, ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಲೆಂದು ಆಶಿಸುತ್ತಿದ್ದೇವೆ. ಇವೆಲ್ಲವೂ ಕೋರ್ಟ್ ತೀರ್ಪು ಮುಖೇನ ನಡೆಯುತ್ತಿದೆ. ಆದ್ದರಿಂದ ಈ ವಿಚಾರದಲ್ಲಿ ಯಾರೂ ಸಂಘರ್ಷಕ್ಕೆ ಇಳಿಯದೆ ಸ್ವಾಗತಿಸಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!