ರಾಷ್ಟ್ರಪತಿ ಪೊಲೀಸ್ ಪದಕ: ಗಂಗಾಧರ ಮಠಪತಿಗೆ ಸನ್ಮಾನ

ಹೊಸ ದಿಗಂತ ವರದಿ, ಬೀದರ:

ಪ್ರಸಕ್ತ ಸಾಲಿನ ರಾಷ್ಟ್ರಪತಿ ಪೊಲೀಸ್ ಪದಕಕ್ಕೆ ಭಾಜನರಾದ ಜಿಲ್ಲೆಯವರೇ ಆದ ಕಲಬುರ್ಗಿಯ ಸಹಾಯಕ ಪೊಲೀಸ್ ಆಯುಕ್ತ ಬಿ.ಎಂ. ಗಂಗಾಧರ ಮಠಪತಿ ಅವರನ್ನು ನಗರದ ನೌಬಾದ್‍ನ ಜ್ಞಾನ ಶಿವಯೋಗಾಶ್ರಮದಲ್ಲಿ ಸನ್ಮಾನಿಸಲಾಯಿತು.
ಗಂಗಾಧರ ಮಠಪತಿ ಅವರಿಗೆ ರಾಷ್ಟ್ರಪತಿ ಪೊಲೀಸ್ ಪದಕ ದೊರೆತಿರುವುದು ಜಿಲ್ಲೆಗೆ ಹೆಮ್ಮೆ, ಅಭಿಮಾನದ ಸಂಗತಿಯಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಹೇಳಿದರು.
ದಕ್ಷ, ನಿಷ್ಠಾವಂತ ಅಧಿಕಾರಿಯಾಗಿರುವ ಮಠಪತಿ ಯುವಕರಿಗೆ ಮಾದರಿಯಾಗಿದ್ದಾರೆ. ಯುವಕರನ್ನು ಸಾಧನೆಗೆ ಪ್ರೇರೇಪಿಸುವ ದಿಸೆಯಲ್ಲಿ ಮಠಪತಿ ಅವರಿಗೆ ಬರುವ ಏಪ್ರಿಲ್‍ನಲ್ಲಿ ಬೀದರ್ ನಗರದಲ್ಲಿ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಠಪತಿ ಅವರು ಪ್ರಾಮಾಣಿಕ ಸೇವೆ ಮೂಲಕ ಉನ್ನತವಾದ ಸಹಾಯಕ ಪೊಲೀಸ್ ಆಯುಕ್ತ ಹುದ್ದೆಗೆ ಏರಿದ್ದಾರೆ. ನಿಷ್ಠೆಯಿಂದ ಸೇವೆ ಸಲ್ಲಿಸಿದವರಿಗೆ ಸ್ಥಾನಮಾನ, ಪ್ರಶಸ್ತಿ, ಸನ್ಮಾನಗಳು ಹುಡುಕಿಕೊಂಡು ಬರುತ್ತವೆ ಎಂದು ಸಾನಿಧ್ಯ ವಹಿಸಿದ್ದ ಡಾ. ರಾಜಶೇಖರ ಶಿವಾಚಾರ್ಯ ಹೇಳಿದರು.
ತಾವು ಕರ್ತವ್ಯ ನಿರ್ವಹಿಸಿದ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸಲು ಮಠಪತಿ ಅವಿರತ ಶ್ರಮಿಸಿದ್ದಾರೆ. ಅದರ ಫಲಶ್ರುತಿಯಿಂದಾಗಿಯೇ ಉನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ನಿವೃತ್ತ ಸಹಾಯಕ ಅಟಾರ್ನಿ ಜನರಲ್ ಜಯರಾಜ್ ಬುಕ್ಕಾ ತಿಳಿಸಿದರು.
ಡಾ. ಬಸವರಾಜ ಮಠಪತಿ, ಮುಖಂಡರಾದ ಸಂಗಮೇಶ ಬಿರಾದಾರ, ಓಂಪ್ರಕಾಶ ರೊಟ್ಟೆ, ಸಂಗು ಹುಮನಾಬಾದೆ ಮೊದಲಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!