ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜೆಡಿಎಸ್ ಬೆಂಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರಪತಿ ಆಯ್ಕೆ ಸಂಬಂಧ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ ನೀಡುವ ಇಂಗಿತವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ದ್ರೌಪದಿ ಮುರ್ಮು ಅವರಿಗೆ ಬಹುಮತದ ಸಂಖ್ಯೆ ಈಗಾಗಲೇ ಸಿಕ್ಕದೆ. ನಮ್ಮ ಪಕ್ಷದ ಬೆಂಬಲ ಅವಶ್ಯಕತೆ ಇಲ್ಲ. ಆದರೂ ನಮ್ಮ ಬೆಂಬಲ ಕೇಳಿದ್ದಾರೆ. ಅದು ಅವರ ಔದಾರ್ಯ ಎಂದು ಹೇಳಿದರು.
ನನ್ನ ಪ್ರಕಾರ ಮುರ್ಮು ಈಗಾಗಲೇ ಗೆದ್ದಾಗಿದೆ.‌ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮುರ್ಮು ಅವರು ಎರಡು ಬಾರಿ ದೂರವಾಣಿ ಕರೆ ಮಾಡಿ ಬೆಂಬಲಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಮನವಿ ಮಾಡಲು‌ ಅವರು ಸಮಯ ಕೋರಿದ್ದರು. ಅವರು ಖುದ್ದು ಬಂದು ಮನವಿ ಮಾಡುವ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಚುನಾವಣಾ ಅಭ್ಯರ್ಥಿಯಾಗಿ ಮುರ್ಮು ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು, ಜೀವನದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದಾರೆ, ತಳಮಟ್ಟದ ಸಮುದಾಯದಿಂದ ಹೇಗೆ ಬೆಳೆದು ಬಂದಿದ್ದಾರೆ ಎಂಬುದನ್ನು ನಾನು ಅರಿತಿದ್ದೇನೆ. ಆದಿವಾಸಿ ಸಮುದಾಯದ ಮಹಿಳೆಯೊಬ್ಬರು ಇಷ್ಟು ದೊಡ್ಡ ಸಾಧನೆ ಮಾಡಿರುವುದು ಸ್ಪೂರ್ತಿದಾಯಕ ಎಂದು ಹೇಳಿದರು.
ಇನ್ನು ಇಲ್ಲಿ ಕಾಂಗ್ರೆಸ್, ಬಿಜೆಪಿ ಅನ್ನುವ ಪ್ರಶ್ನೆ ಅಲ್ಲ. ಬಿ ಟೀಂ ಅನ್ನುವ ಪ್ರಶ್ನೆಯೂ ರಾಷ್ಟ್ರಪತಿ ಚುನಾವಣೆಯಲ್ಲಿ ಬರಲ್ಲ. ನಾವು ತೆಗೆದುಕೊಂಡ ನಿರ್ಧಾರ ಬಿಜೆಪಿ ಬಿ ಟೀಂ ಅಂತ ಪ್ರಚಾರ ಮಾಡೋದು ಇದಕ್ಕೆ ಅನ್ವಯ ಆಗಲ್ಲ ಎಂದು ಅವರು ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ಚಾಟಿ ಬೀಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!