Sunday, July 3, 2022

Latest Posts

ಪದವಿ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿ ಪ್ರಾರಂಭಕ್ಕೆ ಒತ್ತಾಯ: ಎಬಿವಿಪಿಯಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮಂಡ್ಯ:

ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ‌್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ‌್ಯಕರ್ತರು, ಕೊರೋನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಕಾಲೇಜುಗಳಿಗೆ ಬರುತ್ತಿದ್ದಾರೆ. ಆದರೆ ಭೌತಿಕ ತರಗತಿಗಳು ಆರಂಭಗೊಂಡರೂ ಇನ್ನೂ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪಾಠಗಳು ನಡೆಯುತ್ತಿಲ್ಲ ಎಂದು ದೂರಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಸರ್ಕಾರ ಒಂದು ತಿಂಗಳ ತಡವಾಗಿ ನೇಮಿಸಿಕೊಂಡಿದೆ. ಅದು ಅವಶ್ಯಕತೆಗಿಂತ ಕಡಿಮೆ. ಶೇ. 80ರಷ್ಟು ಉಪನ್ಯಾಸಕರನ್ನು ನೇಮಿಸಿಕೊಂಡಿದೆ. ಅ. 28ರಿಂದ ಅತಿಥಿ ಉಪನ್ಯಾಸಕರು ಪಾಠಗಳನ್ನು ಮಾಡುತ್ತಿದ್ದರು. ಆದರೆ ಕಳೆದ ಶುಕ್ರವಾರದಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ಸಿ.1 ಪರೀಕ್ಷೆ ಈ ತಿಂಗಳ ಕೊನೆಯಲ್ಲಿ ಬರುತ್ತಿರುವುದರಿಂದ ಆದಷ್ಟು ಬೇಗ ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಹಿಡಿಯಬೇಕು. ಇನ್ನುಳಿದ 20 ಪ್ರತಿಶತ ಅತಿಥಿ ಉಪನ್ಯಾಸಕರನ್ನು ಆದಷ್ಟು ಬೇಗ ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳು ನಡೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಮುಖಂಡರಾದ ಮನೋಜ್, ಲೋಕೇಶ್, ನೀತಂ, ಯಶ್ವಂತ್, ವಿಜಯ್, ರಶ್ಮಿಘಿ, ಸಹನಾ, ಅನುಪ್, ಸಂಪತ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss