ಬಿಜೆಪಿಯಲ್ಲಿ ಅಧಿಕಾರಕ್ಕಿಂತ ಮೌಲ್ಯಕ್ಕೆ ಹೆಚ್ಚು ಬೆಲೆ: ಒಬಿಸಿ ಮೋರ್ಚಾ ಅಧ್ಯಕ್ಷ ಡಾ.ಲಕ್ಷ್ಮಣ್

ಹೊಸದಿಗಂತ ದಿಜಿಟಲ್‌ ಡೆಸ್ಕ್‌
ಆರು ದಶಕಕ್ಕೂ ಹೆಚ್ಚು ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ ಪಕ್ಷವು ವಂಶವಾದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ 8 ವರ್ಷಗಳ ಅವಧಿಯಲ್ಲಿ ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕರೆದೊಯ್ದಿದೆ. ಮೋದಿಯವರ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ. ಲಕ್ಷ್ಮಣ್ ಕರೆನೀಡಿದ್ದಾರೆ.
ಯಲಹಂಕದ ಹೋಟೆಲ್ ರಮಡಾದಲ್ಲಿ ಗುರುವಾರದಿಂದ ಆರಂಭಗೊಂಡ ಬಿಜೆಪಿ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಯದು ಮೌಲ್ಯಾಧಾರಿತ ರಾಜಕಾರಣ. ಅಧಿಕಾರ ಉಳಿಸಿಕೊಳ್ಳಲು ಅದು ಬದಲಿ ಮಾರ್ಗವನ್ನು ಅನುಸರಿಸುವುದಿಲ್ಲ. ಒಂದು ಮತದಿಂದ ಸರಕಾರ ಪತನವಾಗುವುದೆಂದು ಆಗಿನ ಪ್ರಧಾನಿ ವಾಜಪೇಯಿ ಅವರಿಗೆ ಗೊತ್ತಿದ್ದರೂ ಅವರು ಮೌಲ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಇತರೆ ಪಕ್ಷಗಳು ಕುಟುಂಬವಾದ, ವಂಶವಾದ ಹಾಗೂ ಧನಸಂಗ್ರಹಕ್ಕೆ ಅಧಿಕಾರ ಸಾಧನ ಎಂಬ ನಂಬಿಕೆ ಹೊಂದಿದ್ದರೆ, ಬಿಜೆಪಿ ಅಧಿಕಾರವನ್ನು ಸೇವೆಗೆ ಬಳಸಿಕೊಳ್ಳಬೇಕೆಂಬ ಸಿದ್ಧಾಂತವನ್ನು ಹೊಂದಿದೆ ಎಂದು ವಿಶ್ಲೇಷಿಸಿದರು.
18 ಕೋಟಿಗೂ ಹೆಚ್ಚು ಸದಸ್ಯರಿರುವ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವೆನಿಸಿದ ಬಿಜೆಪಿ, ಚುನಾವಣೆ ಗೆಲ್ಲುವುದಕ್ಕಿಂತ ಕಾರ್ಯಕರ್ತರ ಪ್ರಶಿಕ್ಷಣ- ಶ್ರೇಯೋಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಿದೆ. ಕಾರ್ಯಕರ್ತರು ಸಮಾಜಸೇವೆಯನ್ನು ನಿರಂತರವಾಗಿ ಮಾಡಬೇಕೆಂಬ ಸಿದ್ಧಾಂತ ಬಿಜೆಪಿಯದು ಎಂದು ನುಡಿದರು.
ಇದೊಂದು ಐತಿಹಾಸಿಕ ಮಹತ್ವದ ಪ್ರಶಿಕ್ಷಣ ಶಿಬಿರವಾಗಿದೆ. ಇನ್ನು ಮುಂದೆ ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಿಕ್ಷಣ ವರ್ಗಗಳು ನಡೆಯಲಿವೆ. ಒಬಿಸಿ ಮೋರ್ಚಾವು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಎಲ್ಲ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡು ಅದು ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕೇಂದ್ರ ಸರ್ಕಾರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಹಾಗೂ ಸಹಕಾರ ಇಲಾಖೆ ರಾಜ್ಯ ಸಚಿವ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್.ವರ್ಮ ಅವರು ಮಾತನಾಡಿ, ಮೋದಿಯವರು ದೇಶದ ಅಭಿವೃದ್ಧಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಕೃಷಿಗೆ ಬಜೆಟ್ ಮೊತ್ತ ಹಲವು ಪಟ್ಟು ಹೆಚ್ಚಾಗಿದೆ. ಕಿಸಾನ್ ಸಮ್ಮಾನ್ ನಿಧಿಯಿಂದ ಕೋಟಿಗಟ್ಟಲೆ ರೈತರಿಗೆ ಹೆಚ್ಚಿನ ಪ್ರಯೋಜನ ಲಭಿಸಿದೆ. 2014 ಮತ್ತು 2019ರಲ್ಲಿ ಒಬಿಸಿ ಸಮುದಾಯವು ಮೋದಿಯವರಿಗೆ ಬೆಂಬಲವಾಗಿ ನಿಂತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಂಗಮ್ ಲಾಲ್ ಗುಪ್ತ, ಯಶಪಾಲ್ ಸುವರ್ಣ, ನಿಖಿಲ್ ಆನಂದ್, ಉತ್ತರ ಪ್ರದೇಶ ರಾಜ್ಯದ ಸಚಿವ ನರೇಂದ್ರ ಕಶ್ಯಪ್, ರಾಜ್ಯದ ಸಚಿವ ಎನ್. ಮುನಿರತ್ನ, ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ವಿವಿಧ ರಾಜ್ಯಗಳ ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!