ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕಾಂಗ್ರೆಸಿಗರು ಚಳುವಳಿ ಮಾಡುವ ಮಟ್ಟಕ್ಕೆ ಬೆಲೆ ಏರಿಕೆ ಆಗಿಲ್ಲ. ಈ ವಿಚಾರದಲ್ಲಿ ಚಳುವಳಿ ಮಾಡುವ ನೈತಿಕತೆಯೂ ಅವರಿಗಿಲ್ಲ ಎಂದು ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ಒಂದು ತಾತ್ಕಾಲಿಕ, ಕಾಂಗ್ರೆಸಿಗರು 2004 ರಲ್ಲಿ ಅಧಿಕಾರ ಸ್ವೀಕರಿಸುವಾಗ ಸಿಲಿಂಡರ್ ಬೆಲೆ 292 ರೂ. ಇತ್ತು. ಅವರು ಅಧಿಕಾರ ಬಿಟ್ಟುಹೋಗುವಾಗ 981 ರೂ. ಇತ್ತು. ಅದು ಕಡಿಮೆಯಾಗಿ ಈಗ ಮತ್ತೆ ಏರಿಕೆಯಾಗಿದೆ. ಈ ಕಾರಣಕ್ಕೆ ಕಾಂಗ್ರೆಸ್ಗೆ ಚಳುವಳಿ ಮಾಡುವ ನೈತಿಕತೆ ಇಲ್ಲ ಎಂದರು.
ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಜಾಗತಿಕ ಆರ್ಥಿಕ ಸಂಕಷ್ಟ ಎದುರಾಗಿದೆ. ಅಡುಗೆ ಎಣ್ಣೆಗಳನ್ನು ನಾವು ವಿದೇಶದಿಂದಲೇ ಶೇ.80 ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಕೃಷಿ ಪ್ರಧಾನ ದೊಡ್ಡ ರಾಷ್ಟ್ರವಾದರೂ ಪರಾವಲಂಬಿ ಆಗಿದ್ದೇವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಹ ಶೇ.85 ರಷ್ಟನ್ನು ಆಮದು ಮಾಡಿಕೊಳ್ಳುತ್ತೇವೆ. ಇದೆಲ್ಲದರ ಬೆಲೆ ಏರಿಕೆ ತಾತ್ಕಾಲಿಕ ಎಂದು ಭಾವಿಸುತ್ತೇನೆ ಎಂದರು.
ಭ್ರಷ್ಟಾಚಾರ ಮಾಡುವ ಸರ್ಕಾರ ಈಗಿಲ್ಲ. ಈ ಕಾರಣಕ್ಕೆ ಜನರಿಗೆ ಈಗಲೂ ಸರ್ಕಾರದ ಬಗ್ಗೆ ವಿಶ್ವಾಸವಿದೆ. ಹಿಂದೆ ಕಾಂಗ್ರೆಸ್ನ ಭ್ರಷ್ಟಾಚಾರದ ಕಾರಣಕ್ಕೆ ಬೆಲೆ ಏರಿಕೆಯಾಗಿತ್ತು. ಈಗ ಕೋವಿಡ್ ಜಗತ್ತನ್ನು ಎರಡು ವರ್ಷದಿಂದ ಕಾಡುತ್ತಿರುವುದರಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಅದರ ಪರಿಣಾಮ ಬೆಲೆ ಏರಿಕೆ ಆಗಿದೆ ಎಂದರು.
ಉತ್ಪನ್ನ, ಸರಬರಾಜಿನಲ್ಲಿ ಆಗಿರುವ ವ್ಯತ್ಯಯಗಳು, ಬೇರೆ ಬೇರೆ ದೇಶಗಳು ಆರ್ಥಿಕವಾಗಿ ಕುಸಿಯುತ್ತಿರುವುದರ ಪರಿಣಾಮ ಭಾರತದ ಮೇಲೂ ಆಗಿದೆ. ಹಾಗೆಂದು ಭಾರತ ಸರ್ಕಾರ ಸುಮ್ಮನೆ ಕುಳಿತಿಲ್ಲ. 20 ತಿಂಗಳು ಗರೀಬಿ ಕಲ್ಯಾಣ್ ಯೋಜನೆ ಮೂಲಕ ಬಡವರಿಗೆ ಉಚಿತವಾಗಿ ದವಸಕೊಟ್ಟಿರುವ ಜಗತ್ತಿನ ಏಕೈಕ ದೇಶ ಭಾರತ. ಉಚಿತವಾಗಿ 100 ಕೋಟಿ ಜನರಿಗೆ ವ್ಯಾಕ್ಸಿನೇಷನ್ ಮಾಡಿಸುತ್ತಿರುವ ಏಕೈಕ ದೇಶ ಭಾರತ ಎಂದರು.
ಶಿಷ್ಯ ಎಂದು ಹೇಳಿಕೊಂಡಿದ್ದು ನಾನಲ್ಲ
ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದು ನಾನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಸಿ.ಟಿ.ರವಿ ತಿರುಗೇಟು ನೀಡಿದರು.
ಕೊತ್ವಾಲ್ ರಾಮಚಂದ್ರ ತೀರಿಕೊಂಡಾಗ ನಾನು ಪೈಮರಿ ಶಾಲೆಯಲ್ಲಿದ್ದೆ. ಆದರೆ ಕೊತ್ವಾಲ್ ಬಗ್ಗೆ ರವಿ ಬೆಳೆಗೆರೆ ಅವರೋ, ಯಾರೋ ಆದಿನಗಳು ಎನ್ನುವ ಪುಸ್ತಕದಲ್ಲಿ ಯಾರ್ಯಾರು ಅವರ ಶಿಷ್ಯಂದಿರು ಎನ್ನುವುದನ್ನು ಬರೆದಿದ್ದಾರೆ. ಅದರಲ್ಲಿ ನನ್ನ ಹೆಸರಂತೂ ಇಲ್ಲ ಎಂದರು.
ಗೂಂಡಾಗಿರಿ ರಾಜಕಾರಣ ಮಾಡುವುದು ಒಂದು ಮೆರಿಟ್ ಎಂದು ನಾನಂತೂ ಭಾವಿಸಿಲ್ಲ. ನಾನು ಚಳುವಳಿ, ಹೋರಾಟ ಮಾಡಿದ್ದೇನೆ. ಅದೇ ಕಾರಣಕ್ಕೆ ಜೈಲಿಗೆ ಹೋಗಿದ್ದೇನೆ. ನನ್ನಮೇಲೆ ತುಂಬಾ ಕೇಸುಗಳು ಬಿದ್ದಿವೆ. ಅವೆಲ್ಲವೂ ಜನರ ವಿಷಯಗಳು, ಸೈದ್ಧಾಂತಿಕ ವಿಷಯಗಳನ್ನಿಟ್ಟುಕೊಂಡು ಹೋರಾಟ ಮಾಡಿದ ಕೇಸುಗಳು, ಗುಂಡಾಗಿರಿ ಮಾಡಿ, ಭ್ರಷ್ಟಾಚಾರ ಮಾಡಿ ಯಾವಾಗಲೂ ಜೈಲಿಗೆ ಹೋಗಿಲ್ಲ. ಮುಂದೆಯೂ ಹೋಗುವುದಿಲ್ಲ ಎಂದರು.