ಐತಿಹಾಸಿಕ ಕೋಟೆಯಲ್ಲಿ ’ಮನ್ ಕಿ ಬಾತ್’ ಕಾರ್ಯಕ್ರಮ: ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ವರದಿ, ಚಿತ್ರದುರ್ಗ:

ಇಲ್ಲಿನ ಐತಿಹಾಸಿಕ ಏಳು ಸುತ್ತಿನ ಕೋಟೆ ಆವರಣದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ’ಮನ್ ಕಿ ಬಾತ್’ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ಟಿ.ವಿ. ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಸಂಖ್ಯೆಯ ಜನರು ಪ್ರಧಾನಿ ನರೇಂದ್ರ ಮೋದಿ ಅವರ ’ಮನ್ ಕಿ ಬಾತ್’ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪ್ರಧಾನಿ ನರೇಂದ್ರ ಮೋದಿಯವರು ಸಶಕ್ತ ಭಾರತ, ಶ್ರೇಷ್ಠ ಭಾರತದ ಪರಿಕಲ್ಪನೆಯ ಬಗ್ಗೆ ಸಂದೇಶ ನೀಡಿದರು. ದೇಶವು ವಿವಿಧ ರಂಗಗಳಲ್ಲಿ ಸಾಧಿಸಿರುವ ಅಭಿವೃದ್ಧಿ, ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿಯ ಬಗ್ಗೆ ತಿಳಿಸಿದರು. ಹಿಂದುಳಿದ ಜನರು ಹೇಗೆ ಅಭಿವೃದ್ದಿ ಸಾಧಿಸಬಹುದು. ಆ ಮೂಲಕ ಮುಖ್ಯವಾಹಿನಿಗೆ ಬರುವ ಕುರಿತು ಮಾಹಿತಿ ನೀಡಿದರು. ಅದರಂತೆ ಪ್ರತಿಯೊಬ್ಬರೂ ಸಾಧನೆಗೆ ಮುಂದಾಗಿ, ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಸಾಹಸಿ ಜ್ಯೋತಿರಾಜ್ ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಿಂದ ನನಗೆ ಉತ್ತಮ ಪ್ರೇರಣೆ ದೊರೆಯಿತು. ನರೇಂದ್ರ ಮೋದಿಯವರು ಪ್ರಧಾನಿ ಆದ ಮೇಲೆ ಕ್ರೀಡಾಪಟುಗಳಿಗೆ ಬೆಲೆ ಬಂದಂತಾಗಿದೆ. ಯಾವುದೇ ಕ್ರೀಡಾಕೂಟ ಅಥವಾ ಎಲ್ಲೇ ಹೋದರೂ ಗೌರವ ದೊರೆಯುತ್ತಿದೆ. ಇದರಿಂದ ಅನೇಕ ಕ್ರೀಡಾ ಸಾಧಕರಿಗೆ ಉತ್ತಮ ಪ್ರೇರಣೆ ದೊರೆಯುತ್ತಿದೆ ಎಂದರು.
ಕೋಟೆಯ ಪ್ರವಾಸಿ ಮಾರ್ಗದರ್ಶಿ ಮೊಯುದ್ದೀನ್‌ಖಾನ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳಿಂದ ಭಾರತೀಯರಾದ ನಮಗೆ ಪ್ರೇರಣೆ ದೊರೆಯುತ್ತಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದುಳಿದವರು ಹೇಗೆ ಮುನ್ನೆಲೆಗೆ ಬರಬೇಕು. ಹೇಗೆ ಸಾಧನೆ ಮಾಡಬಹುದು ಎಂಬುದನ್ನು ಉದಾಹರಣೆ ಮೂಲಕ ತಿಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ರಂಗಗಳಲ್ಲಿ ಉತ್ತಮ ಸಾಧನೆ ಮಾಡುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಟೈಕ್ವಾಂಡೊ ತರಬೇತುದಾರರಾದ ಅನಿತಾ ಮಹಂತೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಯೊಂದು ಮಾತುಗಳು ಪ್ರೇರಣಾದಾಯಕವಾಗಿವೆ. ಇದರಿಂದಾಗಿ ಬಹುತೇಕ ಜನರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಕ್ರೀಡೆ ಸಏರಿದಂತೆ ವಿವಿಧ ರಂಗಗಳಲ್ಲಿನ ಸಾಧಕರಿಗೆ ಅವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿವೆ ಎಂದರು.
ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಆಶಾಕಿರಣ. ಕಳೆದ ೭೫ ವರ್ಷಗಳಿಂದ ಆಗದ ಕೆಲಸಗಳನ್ನು ನರೇಂದ್ರ ಮೋದಿ ಬಂದ ಮೇಲೆ ಮಾಡಿದ್ದಾರೆ. ಇದರಿಂದ ಭಾರತವು ವಿಶ್ವಗುರು ಆಗುವತ್ತ ಮಹತ್ವದ ಹೆಜ್ಜೆ ಇರಿಸಿದೆ. ಸೈನಿಕರು, ಕ್ರೀಡಾಪಟುಗಳು, ರೈತರು ಸೇರಿದಂತೆ ಎಲ್ಲ ವರ್ಗಗಳ ಜನರನ್ನು ಒಳಗೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಇವರು ಮುಂದಿನ ಹಲವು ವರ್ಷಗಳಲ್ಲೂ ಪ್ರಧಾನಿಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಸಿದ್ದಾಪುರ, ಯುವ ಮುಖಂಡ ಅನಿತ್‌ಕುಮಾರ್, ಬಿಜೆಪಿ ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರವಾಸಿ ಮಾರ್ಗದರ್ಶಕರು, ಕ್ರೀಡಾಪಟುಗಳು, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಕ್ಷಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!