ಡೆನ್ಮಾರ್ಕ್ ನಲ್ಲಿ ಪ್ರಧಾನಿ ಮೋದಿ: ಉಕ್ರೇನ್‌ನಲ್ಲಿ ತಕ್ಷಣದ ಕದನ ವಿರಾಮಕ್ಕೆ ಮನವಿ ಮಾಡಿದ ದ್ವಿರಾಷ್ಟ್ರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಡೆನ್ಮಾರ್ಕ್ ಪ್ರಧಾನಿ ಕೌಂಟರ್ ಮೆಟ್ಟೆ ಫ್ರೆಡೆರಿಕ್ಸೆನ್ ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ಪರಸ್ಪರ ದ್ವಿಪಕ್ಷೀಯ ಸಂಬಂಧವನ್ನು ದೃಢಪಡಿಸುವ ಬಗ್ಗೆ ಮಾತುಕತೆ ನಡೆಸಿದರು.
ಜರ್ಮನಿಯಿಂದ ಕೋಪನ್ ಹ್ಯಾಗನ್​​ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಡ್ಯಾನಿಶ್ ಪ್ರಧಾನಿ ಆತ್ಮೀಯವಾಗಿ ಬರಮಾಡಿಕೊಂಡರು.
ಡೆನ್ಮಾರ್ಕ್‌ಗೆ ಪ್ರಧಾನಿ ಮೋದಿ ಅವರ ಭೇಟಿಯಾಗಿದ್ದು, ಡೆನ್ಮಾರ್ಕ್‌ನ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸವಾದ ಮೇರಿಯನ್‌ಬೋರ್ಗ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಫ್ರೆಡೆರಿಕ್ಸೆನ್ ಸ್ವಾಗತಿಸಿದರು.
ಡೆನ್ಮಾರ್ಕ್​​ನಲ್ಲಿ ಮಾತನಾಡಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಕ್ಷಣದ ಕದನ ವಿರಾಮಕ್ಕೆ ನಾನು ಮತ್ತು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಕರೆ ನೀಡಿದ್ದೇವೆ. ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಾರ್ಗವನ್ನು ಬಳಸಬೇಕು ಎಂದು ಹೇಳಿದರು.
ಕೋಪನ್‌ಹೇಗನ್‌ನಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಉಭಯ ನಾಯಕರು ಮುಕ್ತ ಮತ್ತು ಅಂತರ್ಗತ’ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಾತ್ರಿಪಡಿಸಿಕೊಳ್ಳಲು ಒತ್ತು ನೀಡಿದರು.
ಯುದ್ಧವನ್ನು ಕೊನೆಗೊಳಿಸಲು ಭಾರತವು ರಷ್ಯಾದ ಮೇಲೆ ತನ್ನ ಪ್ರಭಾವವನ್ನು ಬಳಸುತ್ತದೆ ಎಂದು ನಾನು ಆಶಿಸಿರುವುದಾಗಿ ಫ್ರೆಡೆರಿಕ್ಸೆನ್ ಹೇಳಿದರು. ಈ ಯುದ್ಧ ಮತ್ತು ಕೊಲೆಗಳನ್ನು ಕೊನೆಗೊಳಿಸಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಡೆನ್ಮಾರ್ಕ್ ಪ್ರಧಾನಿ ಮನವಿ ಮಾಡಿದ್ದಾರೆ. ಬುಕಾದಲ್ಲಿ ನಾಗರಿಕರ ಹತ್ಯೆಗಳ ವರದಿಗಳು ತೀವ್ರ ಆಘಾತಕಾರಿಯಾಗಿದೆ. ನಾವು ಈ ಹತ್ಯೆಗಳನ್ನು ಖಂಡಿಸಿದ್ದೇವೆ ಮತ್ತು ಸ್ವತಂತ್ರ ತನಿಖೆಯ ಅಗತ್ಯವನ್ನು ನಾವು ಒತ್ತಿ ಹೇಳುತ್ತೇವೆ ಎಂದು ಅವರು ಹೇಳಿದರು.
ಮೋದಿ ಮತ್ತು ಫ್ರೆಡೆರಿಕ್ಸೆನ್ ನೇತೃತ್ವದ ನಿಯೋಗ ಮಟ್ಟದ ಮಾತುಕತೆಗಳ ಸಂದರ್ಭದಲ್ಲಿ, ಭಾರತ ಮತ್ತು ಡೆನ್ಮಾರ್ಕ್ ಹಸಿರು ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಪ್ರಗತಿಯನ್ನು ಪರಿಶೀಲಿಸಿದವು.
ಕೌಶಲ್ಯ ಅಭಿವೃದ್ಧಿ, ಹವಾಮಾನ, ನವೀಕರಿಸಬಹುದಾದ ಇಂಧನ, ಆರ್ಕ್ಟಿಕ್, ಪಿ2ಪಿ ಸಂಬಂಧಗಳ ಕ್ಷೇತ್ರಗಳಲ್ಲಿ ಅವರು ವ್ಯಾಪಕವಾದ ಸಹಕಾರವನ್ನು ಚರ್ಚಿಸಿದರು.
200 ಕ್ಕೂ ಹೆಚ್ಚು ಡ್ಯಾನಿಶ್ ಕಂಪನಿಗಳು ಭಾರತದಲ್ಲಿ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ – ಉದಾಹರಣೆಗೆ ಪವನ ಶಕ್ತಿ, ಹಡಗು, ಸಲಹಾ ಕೇಂದ್ರ, ಆಹಾರ ಸಂಸ್ಕರಣೆ, ಇಂಜಿನಿಯರಿಂಗ್, ಇತ್ಯಾದಿ. ‘ವ್ಯಾಪಾರ ಮಾಡಲು ಸುಲಭ’ ಮತ್ತು ನಮ್ಮ ಸ್ಥೂಲ ಆರ್ಥಿಕ ಸುಧಾರಣೆಗಳ ಪ್ರಯೋಜನಗಳನ್ನು ಅವರು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಸರ್ಕಾರವು ಹಸಿರು ಪರಿವರ್ತನೆಗಾಗಿ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಈ ಪ್ರಮುಖ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಡ್ಯಾನಿಶ್ ಪರಿಹಾರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನಾನು ಹೆಮ್ಮೆಪಡುತ್ತೇನೆ ಎಂದು ಫ್ರೆಡೆರಿಕ್ಸೆನ್ ಹೇಳಿದರು.
ಭಾರತ ಮತ್ತು ಡೆನ್ಮಾರ್ಕ್ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಮೌಲ್ಯಗಳನ್ನು ಹಂಚಿಕೊಂಡಿವೆ ಎಂದು ಮೋದಿ ಹೇಳಿದರು. ಇದಕ್ಕೆ ಸಹಮತಿ ಸೂಚಿಸಿದ ಫ್ರೆಡೆರಿಕ್ಸೆನ್ ನಾವು ಅನೇಕ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ. ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ. ನಾವಿಬ್ಬರೂ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ನಂಬುತ್ತೇವೆ. ಅಂತಹ ಸಮಯದಲ್ಲಿ, ನಾವು ನಮ್ಮ ನಡುವೆ ಇನ್ನೂ ಬಲವಾದ ಸೇತುವೆಯನ್ನು ನಿರ್ಮಿಸಬೇಕಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!