ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಹುತೇಕ ಹೊಸ ಮುಖಗಳಿಗೆ ಈ ಸಲದ ಕ್ಯಾಬಿನೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅತಿ ಹೆಚ್ಚು ಯುವ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.ಈ ಪೈಕಿ 43 ಸಚಿವರಲ್ಲಿ 35ನೇ ವಯಸ್ಸಿನಲ್ಲೇ ಸಂಸದನೋರ್ವ ಸಂಪುಟ ಸೇರುವ ಮೂಲಕ ಹೊಸ ದಾಖಲೆ ಬರೆದರು.
ಈ ಬಾರಿ ಸಂಪುಟ ವಿಸ್ತರಣೆ ವೇಳೆ ಸ್ಥಾನ ಪಡೆದ ಅತ್ಯಂತ ಕಿರಿಯ ಸಂಸದನೆಂದರೆ ಕೋಲ್ಕತ್ತ ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದ ನಿತೀಶ್ ಪ್ರಮಾಣಿಕ್.ಪಶ್ಚಿಮ ಬಂಗಾಳದಿಂದ ಈ ಬಾರಿ ಒಟ್ಟು ನಾಲ್ವರು ಸಂಸದರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುತ್ತಿದ್ದು, ಅದರಲ್ಲಿ 35 ವರ್ಷದ ನಿತೀಶ್ ಪ್ರಮಾಣಿಕ್ ಕೂಡ ಒಬ್ಬರು. ಹಾಗೇ, ಕೂಚ್ ಬೆಹಾರ್ನಿಂದ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುತ್ತಿರುವ ಮೊದಲ ಸಂಸದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಇವರು ರಾಜ್ಭೋಂಗ್ಶಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಜನಾಂಗದವರೊಬ್ಬ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆದಿದ್ದು ನಿಜಕ್ಕೂ ಸಾಧನೆ ಎಂದೇ ಹೇಳಲಾಗುತ್ತಿದೆ.
ನಿತೀಶ್ ಪ್ರಮಾಣಿಕ್ ಬಿಜೆಪಿ ಸೇರ್ಪಡೆಯಾಗುವುದಕ್ಕೂ ಮೊದಲು ತೃಣಮೂಲ ಕಾಂಗ್ರೆಸ್ನಲ್ಲಿಯೇ ಇದ್ದವರು. ನಂತರ ಬಿಜೆಪಿ ಸೇರಿ 2019ರ ಲೋಕಸಭಾ ಚುನಾವಣೆಯಲ್ಲಿ ಕೂಚ್ ಬೆಹಾರ್ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರೀಗ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇವರು ಬಿಸಿಎ ಪದವೀಧರರಾಗಿದ್ದು, ರಾಜಕೀಯಕ್ಕೆ ಇಳಿಯುವ ಮೊದಲು ಶಿಕ್ಷಕ ವೃತ್ತಿ ನಡೆಸುತ್ತಿದ್ದರು.