ಶ್ರೀರಂಗಪಟ್ಟಣ-ಗುಡ್ಡೆಹೊಸೂರು ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಮೋದಿ ಚಾಲನೆ: ಏನಿದರ ವೈಶಿಷ್ಟ್ಯ?

ಹೊಸದಿಗಂತ ವರದಿ ಮಡಿಕೇರಿ:

ಶ್ರೀರಂಗಪಟ್ಟಣ ಮತ್ತು ಕೊಡಗಿನ ಗುಡ್ಡೆಹೊಸೂರುವರೆಗಿನ 92.3 ಕಿಮೀ. ಉದ್ದದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಮಾ.12ರಂದು ಪ್ರಧಾನಿ ನರೇಂದ್ರಮೋದಿ ಅವರು ಮಂಡ್ಯದಲ್ಲಿ ಚಾಲನೆ ನೀಡಿದ್ದಾರೆ. ಮಾ.12ರಂದು ಮಂಡ್ಯಕ್ಕೆ ಆಗಮಿಸಿರುವ ಪ್ರಧಾನಿಯವರು ಮೈಸೂರು-ಬೆಂಗಳೂರು ನಡುವಿನ 3,560 ಕೋಟಿ ರೂ. ವೆಚ್ಚದ 10 ಪಥಗಳ ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ಇದೇ ಸಂದರ್ಭ ಅವರು ಮೈಸೂರು- ಗುಡ್ಡೆಹೊಸೂರು ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಯೋಜನೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆಗಳು ನಡೆದಿದ್ದು, ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗುವ ಈ ಯೋಜನೆಗೆ 11 ಕಂಪನಿಗಳು ತಮ್ಮ ಬಿಡ್‌ಗಳನ್ನು ಸಲ್ಲಿಸಿರುವುದಾಗಿ ಹೇಳಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಶೀಘ್ರದಲ್ಲೇ ಅಂತಿಮ ಟೆಂಡರ್’ದಾರರನ್ನು ಘೋಷಿಸುವ ನಿರೀಕ್ಷೆಯಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಫೆ.8ರಂದು ರಾಷ್ಟ್ರೀಯ ಹೆದ್ದಾರಿಯ (NH-275) ಮೈಸೂರಿನಿಂದ ಕುಶಾಲನಗರ ಭಾಗಕ್ಕೆ ಅನುದಾನವನ್ನು ಘೋಷಿಸಿದ್ದು, ಪ್ರಥಮ ಹಂತದಲ್ಲಿ ಸುಮಾರು 909.86 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.

ಈ ಯೋಜನೆಯು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಪ್ರಾರಂಭವಾಗಿ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಳಿ ಕೊನೆಗೊಳ್ಳುತ್ತದೆ. ಹೆದ್ದಾರಿ ಪ್ರಾಧಿಕಾರದ ಮೂಲಗಳ ಪ್ರಕಾರ, ಪಶ್ಚಿಮವಾಹಿನಿ ಮತ್ತು ಗುಡ್ಡೆಹೊಸೂರು ನಡುವಿನ 92.3 ಕಿಮೀ ರಸ್ತೆಯನ್ನು ಭಾರತಮಾಲಾ ಪರಿಯೋಜನಾ ಹಂತ-1 ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗುತ್ತಿದ್ದು, ಈ ಮೆಗಾ ಯೋಜನೆಯು 2026 ರಲ್ಲಿ ಪೂರ್ಣಗೊಳ್ಳಬೇಕಿದೆ.

ಕಡಿಮೆಯಾಗಲಿದೆ ಪ್ರಯಾಣದ ಸಮಯ:

ಈ ಯೋಜನೆಯು ಪ್ರಸಕ್ತ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ (NH-275) ಗೆ ಸಮಾನಾಂತರವಾಗಿ ರೂಪುಗೊಳ್ಳಲಿದ್ದು, ಗುಡ್ಡೆಹೊಸೂರನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ‌ 119 ಕಿಮೀ.ಉದ್ದದ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ. ಇದು ಈಗಿರುವ ಮಡಿಕೇರಿ-ಬೆಂಗಳೂರು ನಡುವಿನ ಸುಮಾರು 7 ಗಂಟೆಗಳ ಪ್ರಯಾಣದ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ.

ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ 

  • ಗುಡ್ಡೆಹೊಸೂರಿನಿಂದ ಕುಶಾಲನಗರ ಬೈಪಾಸ್‌- ಹಾಸನ-ಪಿರಿಯಾಪಟ್ಟಣ ರಸ್ತೆ ಜಂಕ್ಷನ್‌ವರೆಗೆ (22 ಕಿಮೀ ಮತ್ತು ಅಂದಾಜು ವೆಚ್ಚ ರೂ. 617.14 ಕೋಟಿ)
  • ಹೆಮ್ಮಿಗೆ ಗ್ರಾಮದ ಹಾಸನ- ಪಿರಿಯಾಪಟ್ಟಣ ರಸ್ತೆ ಜಂಕ್ಷನ್‌ನಿಂದ ರಾಮನಾಥಪುರ -ತೆರಕಣಾಂಬಿ ರಸ್ತೆ ಕೆ.ಆರ್. ನಗರ ಜಂಕ್ಷನ್ (24.1 ಕಿ.ಮೀ ಮತ್ತು ಅಂದಾಜು ವೆಚ್ಚ ರೂ. 589.50 ಕೋಟಿ)
  • ರಾಮನಾಥಪುರ-ತೆರಕಣಾಂಬಿ ರಸ್ತೆಯಿಂದ ಹುಣಸೂರಿನ ಕೆ.ಆರ್.ನಗರ ಜಂಕ್ಷನ್’ನಿಂದ ಯಲಚಹಳ್ಳಿ ಬಳಿ ಇಲವಾಲ-ಕೆ.ಆರ್. ನಗರ ರಸ್ತೆ ಜಂಕ್ಷನ್ (26.5 ಕಿ.ಮೀ ಮತ್ತು ಅಂದಾಜು ವೆಚ್ಚ ರೂ. 659.48 ಕೋಟಿ)
  • ಯಲಚಹಳ್ಳಿ ಸಮೀಪದ ಇಲವಾಲ ಕೆ.ಆರ್. ನಗರ ರಸ್ತೆ ಜಂಕ್ಷನ್’ನಿಂದ ಶ್ರೀರಂಗಪಟ್ಟಣ ಬೈಪಾಸ್ ಪಶ್ಚಿಮವಾಹಿನಿ ಬಳಿ (18.985 ಕಿ.ಮೀ ಅಂದಾಜು ವೆಚ್ಚ 662.83 ಕೋಟಿ ರೂ.)

ಎಕ್ಸ್‌ಪ್ರೆಸ್‌ವೇ ಬೆಂಗಳೂರಿನಿಂದ ಕುಶಾಲನಗರಕ್ಕೆ ಸುಗಮ ಸಂಪರ್ಕ ಮತ್ತು ತಡೆರಹಿತ ಪ್ರಯಾಣವನ್ನು ಒದಗಿಸುತ್ತದೆ. ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ 275, ಈಗಾಗಲೇ ಅದರ ಸ್ಯಾಚುರೇಶನ್ ಪಾಯಿಂಟ್ ಅನ್ನು ತಲುಪಿರುವುದರಿಂದ ಅದಕ್ಕೆ ಸಮಾನಾಂತರವಾಗಿ ಹೊಸ ಚತುಷ್ಪಥ ರಸ್ತೆ ನಿರ್ಮಾಣವಾಗುವುದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎನ್ನುತ್ತಾರೆ ಪ್ರಾಧಿಕಾರದ‌ ಅಧಿಕಾರಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!