Thursday, August 11, 2022

Latest Posts

ಖಾಸಗಿ ಆ್ಯಂಬುಲೆನ್ಸ್ ಮುಟ್ಟುಗೋಲು ಹಾಕಿ, ಆರೋಗ್ಯ ಸೇವೆಗೆ ಉಪಯೋಗಿಸಲು ಅಧಿಕಾರಿಗಳಿಗೆ ಸಚಿವ ಲಿಂಬಾವಳಿ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕೋಲಾರ:

ಹೆಚ್ಚಿನ ಹಣ ಸುಲಿಗೆ ಆರೋಪದ ಹಿನ್ನಲೆಯಲ್ಲಿ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗುವ ಖಾಸಗಿ ಆಂಬುಲೆನ್ಸ್‌ಗಳಿಗೆ ಕಡಿವಾಣ ಹಾಕದೇ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಆರೋಗ್ಯ ಸೇವೆಗೆ ಬಳಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯ ಕೋವಿಡ್ ವಾರ್ ರೂಮ್ ಮತ್ತು ಜಿಲ್ಲಾ ಎಸ್.ಎನ್.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿವಿಧ ಆಸ್ಪತ್ರೆಗಳಿಗೆ ತೆರಳುವವರಿಂದ ಖಾಸಗಿ ಆಂಬುಲೆನ್ಸ್‌ನವರು ಹೆಚ್ಚುವರಿ ಹಣ ಸುಲಿಗೆ ಮಾಡುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಅಂತಹ ಆಂಬುಲೆನ್ಸ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಅವುಗಳಿಗೆ ಕಡಿವಾಣ ಹಾಕುವುದಿಲ್ಲ. ಬದಲಿಗೆ ನಾವೇ ಆರೋಗ್ಯ ಸೇವೆಗೆ ಬಳಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕೋವಿಡ್ ಪರೀಕ್ಷೆಗೆ ಫೋ.ನಂಬರ್ ನೀಡಿ

ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡವರು ಅವರ ಮೊಬೈಲ್ ನಂಬರ್, ವಿಳಾಸ ಸರಿಯಾಗಿ ನೀಡಿದರೆ, ನಿಮ್ಮ ಪ್ರಾಣ ರಕ್ಷಣೆಗೆ ಮತ್ತು ಸಮಾಜದ ರಕ್ಷಣೆಗೆ ನೀವು ನೀಡುವ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.
ಕೋವಿಡ್ ವಾರ್ ರೂಮ್‌ನಲ್ಲಿ ಕನಿಷ್ಠ ಶೇ.25 ರಿಂದ 30 ರಷ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರನ್ನು  ನಾವು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ. ಪರೀಕ್ಷೆ ಮಾಡಿಸಿಕೊಂಡವರ ಫಲಿತಾಂಶವನ್ನು ತಿಳಿದುಕೊಳ್ಳಲು ವಾರ್ ರೂಂ ಕಡೆಯಿಂದ ಕರೆ ಮಾಡಿದಾಗ  ಪ್ರತಿಕ್ರಿಯೆ ನೀಡಿ ಸರಿಯಾದ ವಿಳಾಸ, ಮೊಬೈಲ್ ನಂಬರ್ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿಯವರು ಮನೆ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ನಿಮ್ಮ ರಕ್ಷಣೆ ಮಾಡುತ್ತಾರೆ, ಅವರಿಗೆ ನಿಮ್ಮ ಸಹಕಾರ ಬೇಕು ಎಂದು ಹೇಳಿದರು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 100 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಜಿಲ್ಲಾ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯನ್ನು 2-3 ದಿನಗಳಲ್ಲಿ ಸರಿ ಮಾಡಲಾಗುವುದು. ಒಂದು ವಾರದಲ್ಲಿ ಎಸ್.ಎನ್.ಆರ್ ಆಸ್ಪತ್ರೆ ಮತ್ತು ಕೆ.ಜಿ.ಎಫ್ ಆಸ್ಪತ್ರೆಯಲ್ಲಿ ತಲಾ ೫೦ ಆಕ್ಸಿಜನ್‌ಬೆಡ್‌ಗಳನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ಇರುವ 40 ವೆಂಟಿಲೇಟರ್‌ಗಳು ಮತ್ತು ಐ.ಸಿ.ಯು.ಗಳು ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ದಿನ ಜಿಲ್ಲಾಡಳಿತಕ್ಕೆ ಒಳಪಡುವ ಆಸ್ಪತ್ರೆಗಳಲ್ಲಿನ ಬೆಡ್‌ಗಳ ಸೌಲಭ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಸಂಜೆ 6 ಗಂಟೆಗೆ ಬುಲೆಟಿನ್ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ.  ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ಬೆಡ್ ಹೆಚ್ಚು ಮಾಡಲಾಗುತ್ತದೆ ಮತ್ತು ಆಕ್ಸಿಜನ್ ಪ್ಲ್ಯಾಂಟ್ ನಿರ್ಮಿಸಲಾಗುತ್ತದೆ. ಇವತ್ತಿನ ಅವಶ್ಯಕತೆಗೆ ತಕ್ಕಷ್ಟು  ಬೆಡ್‌ಗಳ ಸೌಲಭ್ಯ ಇದೆ ಎಂದು ತಿಳಿಸಿದರು.
5 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದವರಿಗೆ ಮನೆ ಮನೆಗೂ ಮೆಡಿಕಲ್ ಕಿಟ್ ಕೊಡುತಿದ್ದೇವೆ. ಯಾರಿಗಾದರೂ ತಲುಪದಿದ್ದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದರೆ ಪಂಚಾಯಿತಿ ಟಾಸ್ಕ್ ಪೋರ್ಸ್ ತಂದು ಕೊಡುತ್ತಾರೆ. ವ್ಯಾಕ್ಸಿನ್ 45ವರ್ಷ  ಮೇಲ್ಪಟ್ಟವರಿಗೆ ಮತ್ತು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಲಕ್ಷಣಗಳು ಕಂಡು ಬಂದ ತಕ್ಷಣ  ಹೆದರದೆ  ಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು. ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕತೆಯರು  ಪರಿಶೀಲನೆ ನಡೆಸಿ ಕೋವಿಡ್ ಲಕ್ಷಣಗಳು ಕಂಡು ಬಂದ ತಕ್ಷಣ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುವುದು ಎಂದು ತಿಳಿಸಿದರು.
ನಂತರ ಮಾಲೂರಿನ ಸಾರ್ವಜನಿಕ ಆಸ್ಪತ್ರೆ ಮತ್ತು ಕೊರೋನಾ ವಾರ್ ರೂಮ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ  ಸಂಸದ ಎಸ್.ಮುನಿಸ್ವಾಮಿ, ಶಾಸಕ ನಂಜೇಗೌಡ, ಕೋಲಾರ ಜಿಲ್ಲಾಧಿಕಾರಿ  ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ತಶೀಲ್ದಾರ್  ಶೋಭಿತಾ,  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ ಕುಮಾರ್ ಮತ್ತು  ಜಿಲ್ಲಾ ಶಸ್ತ್ರಚಿಕಿತ್ಸಾಕ ಡಾ.ಜಗದೀಶ್ ಮತ್ತಿತರರು  ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss