ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭದ ನಂತರವೇ ಖಾಸಗಿ ಶಿಕ್ಷಣ ಸಂಸ್ಥೆಗಳ ಬೋಧಕ ಹುದ್ದೆಗಳಿಗೆ ನೇಮಕ ಆದೇಶಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನಲ್ಲಿ ನಿಯಮ 72ರ ಅಡಿ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ ಅರುಣ್ ಶಹಾಪೂರ್ ನೀಡಿರುವ ಸೂಚನಾ ಪತ್ರಕ್ಕೆ ಸರ್ಕಾರದ ಉತ್ತರದಲ್ಲಿ ವಿವರ ನೀಡಿರುವ ಅವರು, ಕೊರೋನಾದಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿರುವ ಹಿನ್ನೆಲೆ ಹೊರಡಿಸಿರುವ ಸುತ್ತೋಲೆಯಲ್ಲಿ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಇತರ ಯಾವುದೇ ಕಾರಣಗಳಿಂದ ಖಾಲಿ ಇರುವ ಹುದ್ದೆಗಳನ್ನು 2020-21ನೇ ಸಾಲಿನಲ್ಲಿ ಭರ್ತಿ ಮಾಡುವುದನ್ನು ತಡೆ ಹಿಡಿಯಲಾಗಿದೆ.
ಕಳೆದ ವರ್ಷ ಹೊರಡಿಸಿರುವ ಸುತ್ತೋಲೆ ಪ್ರಕಾರ, 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ ಲಾಗ್ ಹುದ್ದೆಗಳೂ ಸೇರಿದಂತೆ ರಾಜ್ಯ ಸಿವಿಲ್ ಸೇವೆಯಲ್ಲಿನ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಸಹ ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಇನ್ನು ಶೈಕ್ಷಣಿಕ ಹಿತದೃಷ್ಟಿ ಹಾಗೂ ಬೋಧಕರ ವಯೋಮಾನ ಮೀರುವುದನ್ನು ಪರಿಗಣಿಸಿ, ಖಾಸಗಿ ಅನುದಾನಿತ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ 2015ರ ಡಿ.31ರ ಅಂತ್ಯಕ್ಕೆ ನಿವೃತ್ತಿ, ಮರಣ, ರಾಜೀನಾಮೆ ಇತ್ಯಾದಿ ಕಾರಣಗಳಿಂದ ಖಾಲಿ ಉಂಟಾಗಿರುವ ಹುದ್ದೆಗಳ ಪೈಕಿ ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡು ನೇಮಕಾತಿ ಪ್ರಕ್ರಿಯೆಯು ಇಲಾಖೆಯಲ್ಲಿ ಅಂತಿಮ ಹಂತದಲ್ಲಿ ಬಾಕಿ ಇರುವ ಕ್ರಮವಾಗಿ 257, 173 ಮತ್ತು 340 ಬೋಧಕ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು 2021-22ನೇ ಶೈಕ್ಷಣಿಕ ವರ್ಷ ಪ್ರಾರಂಭಗೊಂಡ ನಂತರ ನೀಡಲು ಸಹಮತಿಸಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಾಗಿರುವ ಕೊರತೆಗಳ ನಿವಾರಣೆಗೆ ನೇಮಕ ಅತ್ಯವಶ್ಯಕವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲೂ ಇಂಥದ್ದೊಂದು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದರು.