ರಾಜ್ಯದಲ್ಲಿ ಅಭಿವೃದ್ಧಿಪರ ಬಿಜೆಪಿಗೇ ಅಧಿಕಾರ ಖಚಿತ: ನಳಿನ್‍ಕುಮಾರ್ ಕಟೀಲು ವಿಶ್ವಾಸ

ಹೊಸದಿಗಂತ ವರದಿ ಮುರ್ಡೇಶ್ವರ:

ರಾಜ್ಯದಲ್ಲೂ ಜನರು ಕುಟುಂಬವಾದ ತಿರಸ್ಕರಿಸಿ ಅಭಿವೃದ್ಧಿಪರ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸದಿಂದ ನುಡಿದರು.
ಮಂಗಳವಾರ ಆರಂಭವಾದ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಸಿಎಂ ಆಗಲು 5 ಜನರಿದ್ದಾರೆ. ಹಿಂದೆ ಇಬ್ಬರಿದ್ದರು. ಕಾಂಗ್ರೆಸ್ ಬೀದಿಜಗಳ ಗಮನಿಸಿದ ಜನತೆ ಆ ಪಕ್ಷವನ್ನು ಸೋಲಿಸಿ ಬಿಜೆಪಿಯನ್ನು ಗೆಲ್ಲಿಸುವುದು ಖಚಿತ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಮಾಡಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ನುಡಿದರು.

ಡಿಕೆಶಿ ಕೊಟ್ಟ ಸೀಟನ್ನು ಸಿದ್ರಾಮಣ್ಣ ಸೋಲಿಸ್ತಾರೆ. ಅದೇ ಮಾದರಿಯಲ್ಲಿ ಸಿದ್ರಾಮಣ್ಣ ಬೆಂಬಲಿಗರನ್ನು ಡಿಕೆಶಿ ಮುಗಿಸುತ್ತಾರೆ. ಇವರಿಬ್ಬರ ಬೆಂಬಲಿಗ ಸ್ಪರ್ಧಿಗಳನ್ನು ಸೋಲಿಸಲು ಖರ್ಗೆ ಶ್ರಮಿಸುತ್ತಾರೆ ಎಂದ ಅವರು, ರೇವಣ್ಣ- ಕುಮಾರಣ್ಣನ ನಡುವೆ ಗಲಾಟೆ ಆರಂಭವಾಗಿದೆ. ಅದಕ್ಕಾಗಿಯೇ ಹಾಸನದ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ ಎಂದರು.

ಗೂಂಡಾಗಿರಿಯ ಹಿನ್ನೆಲೆ ಇರುವ ಡಿ.ಕೆ.ಶಿವಕುಮಾರ್ ಭಯೋತ್ಪಾದನೆಯನ್ನೇ ಸಮರ್ಥಿಸುತ್ತಾರೆ. ಸಿದ್ರಾಮಣ್ಣ, ಪಿಎಫ್‍ಐಯ 2 ಸಾವಿರ ಜನರ ಕೇಸು ರದ್ದು ಮಾಡಿದ್ದರು. ರೈತರ ಆತ್ಮಹತ್ಯೆ ಹೆಚ್ಚಾಯಿತು. ಹಿಂದೂಗಳ ಹತ್ಯೆ ಆಯಿತು. ಆದರೆ, ಗೋಸಾಗಾಟಗಾರರಿಗೆ ಪರಿಹಾರ ಕೊಡಲಾಯಿತು ಎಂದು ವಿವರಿಸಿದರು.

ಸಿದ್ರಾಮಣ್ಣನ ಸರಕಾರ ಗೋಹತ್ಯೆಯ ಪರವಿತ್ತು. ಲೂಟಿ, ಬೆಂಕಿ ಇಡುವವರ ಪರ ಇತ್ತು. ಸ್ಯಾಂಡ್- ಲ್ಯಾಂಡ್- ಡ್ರಗ್ ಮಾಫಿಯಕ್ಕೆ ಸಿದ್ರಾಮಣ್ಣನ ಸರಕಾರವು ಬೆಂಬಲ ಕೊಟ್ಟಿತ್ತು. ಇವೆಲ್ಲವುಗಳನ್ನು ಬೊಮ್ಮಾಯಿ ಸರಕಾರ ನಿಯಂತ್ರಿಸಿದೆ ಎಂದು ತಿಳಿಸಿದರು.

ಉದ್ಘಾಟನೆ:
ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಕೇಂದ್ರ- ರಾಜ್ಯ ಸರಕಾರಗಳ ಸಾಧನೆಗಳನ್ನು ನಾವು ಜನರಿಗೆ ತಿಳಿಸಿದ್ದೇವೆಯೇ? ಎಂದು ಕೇಳಿದರಲ್ಲದೇ ಸ್ವಾಭಿಮಾನಿ ಭಾರತದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ. ಅದಕ್ಕಾಗಿ ಬೂತ್ ಗೆಲುವು, ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳನ್ನು ಚುರುಕುಗೊಳಿಸಬೇಕಿದೆ ಎಂದರು.

ಜಿಲ್ಲಾ ಮತ್ತು ರಾಜ್ಯ ಸಮಿತಿಗಳ ಜೊತೆಗೂಡಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಬಡವರ ಮನೆಗೆ ಅರ್ಜಿ ಕೊಡದೆ ಬರುತ್ತಿದೆ. ರೈತರ ಜಾಗೃತಿ ಮಾಡಬೇಕು. ಆಯುಷ್ಮಾನ್ ಸೇರಿ ಎಲ್ಲ ಯೋಜನೆಗಳ ಕುರಿತು ನೆನಪಿಸಬೇಕಿದೆ. ಮೀಸಲಾತಿ ಪ್ರಮಾಣ ಹೆಚ್ಚಳ, ಉಚಿತ ವಿದ್ಯುತ್, ವಿದ್ಯಾನಿಧಿ ಸೇರಿ ವಿವಿಧ ಯೋಜನೆಗಳ ಕುರಿತ ಮಾಹಿತಿ ಕೊಡಬೇಕಿದೆ ಎಂದು ಕಿವಿಮಾತು ಹೇಳಿದರು.

ಬೇಹುಗಾರಿಕೆ ದಳಗಳು ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಗೆಲುವಿನ ಸೂಚನೆ ನೀಡುತ್ತಿವೆ. ಬಿಜೆಪಿ 150 ಸೀಟು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ನಾಯಕ್, ಶಾಸಕರಾದ ಸುನೀಲ್ ನಾಯ್ಕ, ದಿನಕರ್ ಶೆಟ್ಟಿ, ರೂಪಾಲಿ ನಾಯ್ಕ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!