ಹೊಸದಿಗಂತ ವರದಿ,ಮಂಗಳೂರು:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡಿರುವುದು ಹಾಗೂ ರೈತರ ಬೆಳೆಹಾನಿಗೆ ದುಪ್ಪಟ್ಟು ಪರಿಹಾರ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಸರಕಾರವನ್ನು ಬಿಜೆಪಿ ಕಾರ್ಯಕರ್ತರ ಪರವಾಗಿ ಅಭಿನಂದಿಸುತ್ತೇವೆ ಎಂದು ಬಿಜೆಪಿ ದ.ಕ. ಜಿಲ್ಲಾ ವಕ್ತಾರ ಜಗದೀಶ ಶೇಣವ ಹೇಳಿದರು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳ್ಳಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಬಹುನಿರೀಕ್ಷೆಯ ಬೇಡಿಕೆಯಾಗಿತ್ತು. ಬಲವಂತದಿಂದ, ಆಶೆ, ಆಮಿಷ ಒಡ್ಡಿ, ಅನೇಕ ಮುಗ್ದ ಜನರನ್ನು ಮತಾಂತರ ಮಾಡಲಾಗುತ್ತಿದೆ. 500- 1000 ರೂ. ಮೊತ್ತದ ಔಷಧ ನೀಡಿ ಹಳ್ಳಿಯ ಮುಗ್ಧ ಜನರನ್ನು, ಬಡವರನ್ನು ಹಿಂದು ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರ ನಡೆಸಲಾಗುತ್ತಿದೆ. ನೂತನ ಕಾಯ್ದೆಯಿಂದ ಈ ದಂಧೆಗೆ ತಡೆ ಸಿಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಮತಾಂತರ ನಿಷೇಧ ಕಾನೂನಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಅಲ್ಪಸಂಖ್ಯಾತರನ್ನು ಓಲೈಸುವ ನೀತಿಯಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಬಲವಂತದ, ಆಮಿಷದ ಮತಾಂತರ ನಡೆಸುವುದಿಲ್ಲ ಎಂದಾದರೆ ಅವರಿಗೆ ಕಾಯ್ದೆ ಬಗ್ಗೆ ಭಯ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಮತಾಂತರದ ಉದ್ದೇಶದಿಂದ ಮದುವೆಯಾಗುವುದನ್ನು ಕಾಯ್ದೆ ತಡೆಯಲಿದೆ. ಆ ಮೂಲಕ ಲವ್ ಜಿಹಾದ್ಗೂ ಕಡಿವಾಣ ಬೀಳಲಿದೆ. ಮತಾಂತರ ಆಗುವವರ ಅಧಿಕೃತ ಪಟ್ಟಿಯೂ ಸಿಗಲಿದೆ. ಮತಾಂತರಗೊಂಡು ಎಸ್ಸಿ ಎಸ್ಟಿ ಸೌಲಭ್ಯ ಪಡೆಯುವುದೂ ತಪ್ಪಲಿದೆ ಎಂದು ಜಗದೀಶ ಶೇಣವ ಹೇಳಿದರು.
ಬಿಜೆಪಿ ಸರಕಾರ ತಾನು ರೈತರ ಪರ ಎಂದು ಘೋಷಿಸಿಕೊಳ್ಳುವುದು ಮಾತ್ರವಲ್ಲ. ರೈತರಿಗೆ ಅನೇಕ ಅನುಕೂಲಗಳನ್ನು ಒದಗಿಸಿಕೊಟ್ಟಿದೆ. ಪ್ರಸ್ತುತ ಮುಖ್ಯಮಂತ್ರಿ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಶಿಕ್ಷಣಕ್ಕಾಗಿ ಶಿಷ್ಯವೇತನ ನೀಡುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದರಿಂದಾಗಿ ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗಿನ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವು ದೊರೆಯಲಿದೆ. ಜತೆಗೆ ಅಕಾಲಿಕ ಮಳೆಯಿಂದ ಹಾನಿಗೀಡಾದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ನೀಡುವ ಪರಿಹಾರ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಲಾಗುವುದು ಎಂದು ಹೇಳಿರುವುದು ಅಭಿನಂದನೀಯ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ೧೨೦೦ ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ವಕ್ತಾರ ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.