ಕಲೆಯಲ್ಲಿ ಮಿಥ್ಯದ ವಿಜೃಂಭಣೆ ಸಲ್ಲ: ಸುಚೇಂದ್ರ ಪ್ರಸಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ:

ಕಲಾವಿದರ ಶಾಸ್ತ್ರಸಮ್ಮತ ಕರ್ಮನಿಷ್ಠೆ ಹಾಗೂ ನಿರ್ಮಲ ಮನಸ್ಸಿನ ಕಲಾಸ್ವಾಧಕರಿಂದ ಕಲೋನ್ನತಿ ಸಾಧ್ಯ ಎಂದು ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಕಲಾಸಂಗಮದ ಕುರಿತು ನಡೆದ ಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮುಕ್ತಿ ದಯಪಾಲಿಸುವ ಮಹತ್ ಸಾಧನ ಕಲೆ. ಬೌದ್ಧಿಕ ಉನ್ನತಿ, ಅಧ್ಯಯನಕ್ಕೆ ಕಲೆ ಅವಶ್ಯಕ. ಕಲೆಯ ಹಳೇ ಬೇರುಗಳನ್ನು ಕಡೆಗಣಿಸದೆ ಹೊಸ ಚಿಗುರುಗಳನ್ನು ಶ್ರೇಷ್ಠರೆಂದು ಪರಿಗಣಿಸದೆ ಮುನ್ನಡೆಯಬೇಕು.

ಕಲೆಯಲ್ಲಿ ಮಿಥ್ಯದ ವಿಜೃಂಭಣೆ ಆಗಬಾರದು. ಕಲಾತಂಡಗಳಿಗೆ ಸೂಕ್ತ ವೇದಿಕೆ, ವಂಚಿತರಿಗೆ ಅವಕಾಶ ಕಲ್ಪಿತವಾಗಬೇಕು. ಕಲೋನ್ನತಿಗೆ ಕಲಾಕೇಂದ್ರ, ಕಲಾಸಂಘಟನೆಗಳಲ್ಲಿ ಬದಲಾವಣೆ ಹಾಗೂ ಕಲೆಯ ಧೋರಣೆ, ಧಾರಣೆ ಬದಲಾಗಬೇಕು ಎಂದರು.

ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲು ಮಾತನಾಡಿ, ಕನ್ನಡ ರಂಗಭೂಮಿಗೆ ಹಾವೇರಿಯ ಶಾಂತಕವಿ ಸಕ್ರಿ ಬಾಳಾಚಾರ್ಯರ ಕೊಡುಗೆ ಚಿರಸ್ಮರಣೀಯ. ಹಾಗಾಗಿ ಅವರನ್ನು ಕನ್ನಡ ರಂಗಭೂಮಿ ಪಿತಾಮಹರೆನಿಸಿಕೊಂಡಿದ್ದಾರೆ. ನ: ಭೂತೋ ನ: ಭವಿಷ್ಯತಿ ಎಂಬಂತೆ ನಾಡಿನಾದ್ಯಂತ ನಾಟಕ ಪ್ರದರ್ಶನ ಮಾಡಿದರು. ತಮ್ಮ ಜೀವಿತಾವಧಿಯಲ್ಲಿ 25 ನಾಟಕಗಳನ್ನು ರಚಿಸಿದ್ದರು. ವೃತ್ತಿ ರಂಗಭೂಮಿಯೇ ಆಗಲಿ ಅಥವಾ ಹವ್ಯಾಸಿ ರಂಗಭೂಮಿಯೇ ಆಗಲಿ ಅದನ್ನು ಉಳಿಸುವ ಜವಾಬ್ದಾರಿ ಪ್ರೇಕ್ಷಕನ ಮೇಲಿದೆ ಎಂದರು.

ಶಿಲ್ಪಕಲೆ ಕುರಿತು ವೀರಣ್ಣ ಅರ್ಕಸಾಲಿ ಮಾತನಾಡಿ, ಪ್ರಪಂಚದಲ್ಲಿ ಕಟ್ಟದೇ ಇರುವ ದೇವಾಲಯವೆಂದರೆ ಅದು ಎಲ್ಲೋರಾದ ಕೈಲಾಸ ದೇವಾಲಯ. ಅದನ್ನು ಬೆಟ್ಟದಿಂದ ಕಡಿದು ಮಾಡಲಾಗಿದೆ. ತಂಜಾವೂರಿನ ಬೃಹದೀಶ್ವರ, ಬೇಲೂರು, ಹಳೆಬೀಡು, ಶ್ರವಣ ಬೆಳಗೊಳ, ಲಕ್ಕುಂಡಿ, ಮೂಡಬಿದಿರೆಯ ದೇವಾಲಯಗಳು ನಮ್ಮ ದೇಶದ ಶಿಲ್ಪಕಲೆಯ ಶ್ರೀಮಂತಿಕೆ ಬಿಂಬಿಸುತ್ತದೆ ಎಂದರು.

ಸಂಗೀತ ಮತ್ತು ನೃತ್ಯ ಕ್ಷೇತ್ರದ ಹೊಸ ಪ್ರಯೋಗಗಳ ಕುರಿತು ಮಾತನಾಡಿದ ಡಾ. ಜಯದೇವಿ ಜಂಗಮಶೆಟ್ಟಿ, ಉತ್ತರ ಹಾಗೂ ದಕ್ಷಿಣದ ಸಂಗೀತ, ನೃತ್ಯ ಕಲಾ ಪ್ರಕಾರಗಳ ಸಾಮ್ಯತೆ ಹಾಗೂ ಭಿನ್ನತೆ ವಿವರಿಸಿದರು. ಜನಜಾಗೃತಿಗಾಗಿ ಬೀದಿ ನಾಟಕಗಳು ಕುರಿತು ಮಾತನಾಡಿದ ಗ್ಯಾರಂಟಿ ರಾಮಣ್ಣ ಬೀದಿ ನಾಟಕ ಅಕಾಡೆಮಿ ಸ್ಥಾಪಿಸಲು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!