ಹೊಸ ದಿಗಂತ ವರದಿ,ಮೈಸೂರು:
ಮೈಸೂರಿನ ಚಾಮುಂಡಿ ಬೆಟ್ಟದ ದೇವಾಲಯ ಮಹಾರಾಜರಿಗೆ ಸೇರಿದ ಆಸ್ತಿ, ಆದರೆ ಅದನ್ನು ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತಿದೆ. ಆದರೆ ಚಾಮುಂಡಿ ಬೆಟ್ಟದ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಯಾವ ರೀತಿ ಮಾಡಿದೆ ಎಂಬುದನ್ನು ನೋಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟದ ದೇವಸ್ಥಾನಗಳು ಮೈಸೂರಿನ ಮಹಾರಾಜರಿಗೆ ಸೇರಿದ ಆಸ್ತಿಯಾದರೂ, ಅವುಗಳನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ಅದರಲ್ಲಿ ರಾಜ ಮನೆತನದವರೂ ಭಾಗಿಯಾಗುತ್ತಿದ್ದಾರೆ. ಈಗ ಸರ್ಕಾರ ಚಾಮುಂಡಿಬೆಟ್ಟಕ್ಕೆ ಪ್ರಾಧಿಕಾರವನ್ನು ರಚಿಸಲು ಹೊರಟಿದೆ. ಅದರ ಕಾರ್ಯಕ್ರಮಗಳೇನು ಎಂಬುದನ್ನು ನೋಡಬೇಕಾಗಿದೆ ಎಂದರು.
ಈಗಾಗಲೇ ಮೈಸೂರು ಮಹಾನಗರ ಬೃಹತ್ ಆಗಿ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಬಡಾವಣೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಆದ್ದರಿಂದ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸುಮಾರು ೨ ಸಾವಿರ ಕೋಟಿ ರೂ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕೊಚ್ಚಿ ಹೋಗಿರುವ ತುಂಗಾಭದ್ರಾ ಜಲಾಶಯ ಕ್ರಸ್ಟ್ ಗೇಟ್ ದುರಸ್ಥಿಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಹೋಗಿದೆ. ಕೂಡಲೇ ವಿದೇಶಿ ತಜ್ಞರನ್ನು ಕರೆಸಿ ದುರಸ್ಥಿ ಮಾಡಿಸಬೇಕು. ವಿದೇಶಿ ತಜ್ಞರು ನೀರಿನೊಳಗಿನಿಂದ ರಿಪೇರಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಜಲಾಶಯಗಳ ಸಮರ್ಪಕ ನಿರ್ವಹಣೆಗೆ ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಭ್ಯರ್ಥಿ ಯಾರೆಂಬುದೂ ಇನ್ನೂ ನಿರ್ಧಾರವಾಗಿಲ್ಲ ಎಂದು ನುಡಿದರು.
ಬೃಹತ್ ಮೈಸೂರು ಮಾಡಿದರೆ ಮೈಸೂರು ಹಾಳಾಗುವುದಂತು ಖಚಿತ. ಬೃಹತ್ ಬೆಂಗಳೂರು ಹೇಗೆ ಹಾಳಾಗಿದೆ ಎಂದು ನೋಡಿದರೆ ಗೊತ್ತಾಗುತ್ತದೆ.