ಹೊಸದಿಗಂತ ವರದಿ, ಕೊಡಗು:
ಲಾರಿ ಮಾಲಕರು ಹಾಗೂ ಚಾಲಕರಿಗೆ ವಿವಿಧ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೊಡಗು ಲಾರಿ ಮಾಲಕರ ಮತ್ತು ಚಾಲಕರ ಸಂಘ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಲಾರಿ ಚಾಲಕರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷ ಪಿ.ಟಿ.ರಮೇಶ್ ಮಾತನಾಡಿ, ಇತ್ತೀಚೆಗೆ ಕೊಡಗು ಜಿಲ್ಲೆಯಾದ್ಯಂತ ಕೆಲವು ಇಲಾಖೆಗಳ ಅಧಿಕಾರಿಗಳು ಲಾರಿ ಮಾಲಕರು ಮತ್ತು ಚಾಲಕರ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಿಕೊಂಡು ಮಾಹಿತಿ ನೀಡದೆ ಲಾರಿಯನ್ನು ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಾಕೃತಿಕ ವಿಕೋಪ, ಕೋವಿಡ್ ಸಂದಿಗ್ಧ ಪರಿಸ್ಥಿತಿ ಮತ್ತು ಬೆಲೆ ಏರಿಕೆಯಿಂದ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಲಾರಿ ಮಾಲಕರು ಹಾಗೂ ಚಾಲಕರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕ್ ಸಾಲ ಮತ್ತು ತೆರಿಗೆ ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಇದರ ನಡುವೆಯೇ ಅಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಮಸೂದ್ ಮಹಮ್ಮದ್, ಉಪಾಧ್ಯಕ್ಷ ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.