ಪ್ರಕಾಶಕ ಟಿ.ಎಸ್. ಛಾಯಾಪತಿ ನಿಧನ: ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ

ಹೊಸದಿಗಂತ ವರದಿ ಮೈಸೂರು:
ಹಿರಿಯ ಸಾಹಿತಿ ದಿ.ತ.ಸು.ಶಾಮರಾಯ ಅವರ ಪುತ್ರ ಟಿ.ಎಸ್. ಛಾಯಾಪತಿ ಅವರು‌ ಶನಿವಾರ ರಾತ್ರಿ ಮೈಸೂರಿನಲ್ಲಿ ವಿಧಿವಶರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನೆಲೆಸಿದ್ದ ಅವರು, ತಳುಕಿನ ವೆಂಕಣ್ಣಯ್ಯನ ಗ್ರಂಥಮಾಲೆ‌ ಎಂಬ ಪ್ರಕಾಶನ ಹೊಂದಿದ್ದು, 1,000ಕ್ಕೂ ಅಧಿಕ ಪುಸ್ತಕಗಳನ್ನು ತಮ್ಮ ಪ್ರಕಾಶನದ ಮೂಲಕ ಪ್ರಕಟಿಸಿದ್ದರು. ಮಾತ್ರವಲ್ಲ, ಸುಮಾರು 25 ಕೃತಿಗಳನ್ನು ತಾವೇ ಬರೆದಿದ್ದರು.

ಅವರಿಗೆ ಪತ್ನಿ , ಇಬ್ಬರು ಪುತ್ರರು ಹಾಗೂ ಒಬ್ಬಳು ಮಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಅ.2ರ ಭಾನುವಾರ ಮಧ್ಯಾಹ್ನ ಗೋಕುಲಂ ಬಡಾವಣೆಯ ರುದ್ರಭೂಮಿಯಲ್ಲಿ‌ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಅ.1 ತಳುಕಿನ ವೆಂಕಣ್ಣಯ್ಯನವರ ಜನ್ಮದಿನ. ದುರದೃಷ್ಡವಶಾತ್ ಈ ವಂಶದ ಕುಡಿ, ವೆಂಕಣ್ಣಯ್ಯನವರ ತಮ್ಮನ ಮಗ ಮಹತ್ವದ ಪ್ರಕಾಶಕ ಮತ್ತು ಲೇಖಕ ಟಿ. ಎಸ್. ಛಾಯಾಪತಿ ಇಂದೇ ನಿಧನರಾಗಿದ್ದಾರೆ.

ಛಾಯಾಪತಿಯವರು ಜನಿಸಿದ್ದು 1944ರ ಮೇ 10ರಂದು. ತಂದೆ ತ.ಸು. ಶಾಮರಾಯರು. ತಾಯಿ ಸುಬ್ಬಲಕ್ಷ್ಮಿ, ದೊಡ್ಡಪ್ಪನ ಮಗ ತ.ರಾ.ಸು. ಅವರು. ಟಿ. ಎಸ್. ವೆಂಕಣ್ಣಯ್ಯನವರು ಇವರ ದೊಡ್ಡಪ್ಪನವರು.
ಟಿ.ಎಸ್. ಛಾಯಾಪತಿ ತಾವು ಕಂಡ ಘನವಾದ ಕನಸುಗಳಿಗೆ ಕನ್ನಡ ಸಾಹಿತ್ಯ ಪ್ರಕಾಶನದ ಮೂಲಕ ಘನತರ ಅಸ್ಥಿಭಾರ ಹಾಕಿದವರು. ಅವರ ಕನಸು ನನಸಾಗಿರುವುದನ್ನು ತಳುಕಿನ ವೆಂಕಣ್ಣಯ್ಯ ಸ್ಮಾರಕ ಪ್ರಕಾಶನದ ಮೂಲಕ ಕಾಣಬಹುದು. ಕವಿ, ಪ್ರಕಾಶಕ, ಸಮಾಜ ಸೇವಕನಾದವನು ವ್ಯಾವಹಾರಿಕ ಜೀವನದಲ್ಲಿ ಗೆಲ್ಲುವುದಿಲ್ಲವೆಂಬ ಮಾತಿದೆ. ಆದರೆ, ವ್ಯಾವಹಾರಿಕ ಜೀವನದಲ್ಲಿಯೂ ಛಾಯಾಪತಿ ಗೆದ್ದವರು.

ಒಳ್ಳೆಯದನ್ನು ಮಾಡುವ, ಬೇರೆಯವರಿಂದ ಒಳ್ಳೆಯದನ್ನು ಮಾಡಿಸುವ ಗುಣ ಛಾಯಾಪತಿಯವರಿಗೆ ಹೆತ್ತವರಿಂದಲೇ ಬಳುವಳಿಯಾಗಿ ಬಂದಿತ್ತು. ಇವರ ತಂದೆ ಪ್ರೊ. ತ.ಸು. ಶಾಮರಾಯರು ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾಗಿದ್ದರು. ಅವರ ಸಾಹಿತ್ಯಿಕ ಗರಡಿಯಲ್ಲಿ ಪಳಗಿದವರು ಇವರು ಎಂ.ಕಾಂ. ಪದವೀಧರರಾಗಿದ್ದವರು. ಪುಸ್ತಕೋದ್ಯಮವನ್ನು ವೃತ್ತಿಯಾಗಿ ಸ್ವೀಕರಿಸಿ, ಪ್ರವೃತ್ತಿಯಾಗಿ ಸಾಹಿತ್ಯ ಕೃಷಿ ಮಾಡಿದವರು.

ಛಾಯಾಪತಿ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಹಾ.ಮಾ. ನಾಯಕ್, ದೇಜಗೌ, ನಿಸಾರ್ ಅಹಮದ್, ಮತ್ತೂರು ಕೃಷ್ಣಮೂರ್ತಿ ಹಾಗೂ ಜನಪ್ರಿಯ ಸಾಹಿತಿ, ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಮಗ್ರ ನಾಟಕಗಳ ಸಂಕಲನ ‘ಸಮಸ್ತ ನಾಟಕ’ ಮತ್ತು ಅವರ ಸಮಗ್ರ ಮಕ್ಕಳ ಸಾಹಿತ್ಯ‌ ಕೃತಿ ಪ್ರಕಟಿಸಿದವರು. ಇದಕ್ಕೆ 2016ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಜೊತೆಗೆ ಪ್ರೊ.ಕೆ.ಎಸ್. ನಿಸಾರ್ ಅಹಮದ್‍ ಅವರ ‘ಸೀಮಾತೀತನ ಸಿರಿವಂತ ಸುಗ್ಗಿ’ ಆಯ್ದ ಕವಿತೆಗಳನ್ನು ಪ್ರಕಟಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಮಾಲೆಯ ಹಲವಾರು ಪುಸ್ತಕಗಳು ನೂರಾರು ಪುನರ್ ಮುದ್ರಣ ಕಂಡಿವೆ.

ಛಾಯಾಪತಿಯವರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದರು. ತಂದೆಯಂತೆ ಇವರು ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿ, ‘ಗಾಂಧೀಜಿಯ ಕನಸು ನಜೀರರಿಂದ ನನಸು’, ‘ಅಣ್ಣನ ಸ್ಮರಣೆ’, ‘ಆಡಳಿತ ಭಾಷೆ ಕನ್ನಡ’, ‘ಗುರುಶ್ರೇಷ್ಠ’, ‘ವರದಕ್ಷಿಣೆ – ಸಾಮಾಜಿಕ ಪಿಡುಗು’ ಮುಂತಾದ ಹತ್ತು ಹಲವು ಕೃತಿ ರಚಿಸಿದ್ದರು. 1968ರಲ್ಲಿ ತಮ್ಮ ತಂದೆ ಸಂಸ್ಥಾಪಿಸಿದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಪ್ರಕಾಶನದ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದರು.

1999ರಲ್ಲಿ ರಾಜ್ಯ ಸರ್ಕಾರ ಛಾಯಾಪತಿ ಅವರಿಗೆ ‘ಅತ್ಯುತ್ತಮ ಪ್ರಕಾಶಕ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ಸಾಹಿತ್ಯ ಸಾಧನೆಗೆ ಜಿಲ್ಲಾ ಪ್ರತಿಭಾನ್ವಿತ, ಸಾಹಿತ್ಯ ಸೇವಾಧುರೀಣ, ಕನ್ನಡ ಪ್ರಕಾಶನ ರತ್ನ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗಳ ಜೊತೆಗೆ, 2016ರಂದು ವಿ.ಸೀ. ಸಂಪದ ಪ್ರಶಸ್ತಿ, 2018ರಲ್ಲಿ ಸ್ಟಾರ್ ಆಫ್ ಮೈಸೂರು 40ನೇ ವರ್ಷದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಅನಂತ್‍ಕುಮಾರ್ ಅವರಿಂದ ಗೌರವ ಸನ್ಮಾನ, 2017ರಲ್ಲಿ ಮೈಸೂರಿನ ಭಾರತೀಯ ವಿದ್ಯಾಭವನದಿಂದ ‘ಶ್ರೇಷ್ಠ ಕನ್ನಡ ಪ್ರಕಾಶಕ’ ಪ್ರಶಸ್ತಿ, 2015ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಜೀವಮಾನ ಅನುಪಮ ಸೇವೆಗೆ ‘ಪೌರ ಸಾಹಿತ್ಯ ಸನ್ಮಾನ’ ಸಂದಿದ್ದವು.

2014ರಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು, ಬಂಧು ಬಳಗದವರು ಒಟ್ಟಾಗಿ ಸೇರಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರ ಸಂಪಾದಕತ್ವದಲ್ಲಿ ‘ಛಾಯಾಭಿನಂದನ’ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಎರಡನೇ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಛಾಯಾಪತಿ ಅವರಿಗೆ ಸಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!