Thursday, July 7, 2022

Latest Posts

ಪುನೀತ್ ರಾಜ್‌ಕುಮಾರ್ ಸಹಿತ ಮೂವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಚಿತ್ರ ನಟ ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್, ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಹಾಗೂ ಹಿರಿಯ ವಿಜ್ಞಾನಿ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಮಂಗಳವಾರ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ನಗರದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ವಿವಿಯ 102ನೇ ಪದವಿ ಪ್ರದಾನ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯ ಪಾಲ ಥಾವರ ಚಂದ್ ಗೆಹ್ಲೋಟ್ ಅವರು ಈ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ, ಗೌರವಿಸಿದರು. ಚಿತ್ರ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರು ಪುನೀತ್ ಅವರಿಗೆ ಮರಣೋತ್ತರವಾಗಿ ನೀಡಲಾದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದರು.

ಜಾನಪದ ಗಾಯಕ ಎಂ.ಮಹದೇವಸ್ವಾಮಿ: ಜಾನಪದ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಖ್ಯಾತ ಗಾಯಕ ಎಂ.ಮಹದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್‌ನ್ನು ನೀಡಿಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ ) ನಿವೃತ್ತ ಪ್ರಧಾನ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರು ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವುದನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ವಿವಿಯ 102ನೇ ಘಟಿಕೋತ್ಸವದಲ್ಲಿ ಒಟ್ಟು 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 18,567 ಮಂದಿ ಮಹಿಳೆಯರು, 10,014 ಮಂದಿ ಪುರುಷ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 157 ಮಂದಿ ಪಿಎಚ್ ಡಿ ಪದವಿ ಪಡೆದರು. ಒಟ್ಟು 213 ಮಂದಿ ರ‍್ಯಾಂಕ್ ವಿಜೇತರಿಗೆ ಒಟ್ಟು 376 ಚಿನ್ನದ ಪದಕಗಳು ಹಾಗೂ 214 ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ನ್ಯಾಕ್ ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ಘಟಿಕೋತ್ಸವ ಭಾಷಣ ಮಾಡಿದರು. ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss