ಯುರೋಪಿಗೆ ಗ್ಯಾಸ್ ನಿಲ್ಲಿಸಿ ಮರ್ಮಾಘಾತ ನೀಡಲಿದೆಯಾ ರಷ್ಯ? ಇಂಧನ ಬೇಕಿದ್ರೆ ರುಬೆಲ್ಸ್ ಕರೆನ್ಸಿ ಪಾವತಿಸಿ ಅಂತ ಪುಟಿನ್ ಆದೇಶ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಂತಾರಾಷ್ಟ್ರೀಯ ವಿನಿಮಯ ಕರೆನ್ಸಿಯಾದ ಡಾಲರಿನಲ್ಲಿ ವ್ಯವಹಾರ ನಡೆಸುವುದಕ್ಕೆ ರಷ್ಯಕ್ಕೆ ನಾನಾ ಬಗೆಯ ನಿರ್ಬಂಧದ ತೊಡಕುಗಳನ್ನಿಟ್ಟು ಮೀಸೆ ತಿರುವಿತ್ತು ಅಮೆರಿಕ ಪ್ರಣೀತ ಪಾಶ್ಚಾತ್ಯ ಜಗತ್ತು. ನೋಡುವಷ್ಟು ದಿನ ನೋಡಿ ಈಗ ಪ್ರತಿಯಾಗಿ ಹೆಜ್ಜೆ ಇಟ್ಟಿರುವ ವ್ಲಾದಿಮಿರ್ ಪುಟಿನ್, ಗುರುವಾರ ಹೊಸ ಆದೇಶವೊಂದನ್ನು ಹೊರಡಿಸಿದ್ದು, ತಮ್ಮಿಂದ ಗ್ಯಾಸ್ ಖರೀದಿಸುತ್ತಿರುವ ಯುರೋಪಿನ ರಾಷ್ಟ್ರಗಳು ರುಬೆಲ್ಸ್ ಅರ್ಥಾತ್ ರಷ್ಯ ಕರೆನ್ಸಿಯಲ್ಲೇ ಪಾವತಿಸಬೇಕು ಎಂಬ ನಿಯಮ ವಿಧಿಸಿದ್ದಾರೆ.

ಇದನ್ನು ಯುರೋಪ್ ದೇಶಗಳು ಪಾಲಿಸದಿದ್ದರೆ ಪುಟಿನ್ ಏನು ಮಾಡ್ತಾರೆ? ರಷ್ಯದಿಂದ ದೈತ್ಯ ಪೈಪ್ಲೈನ್ಗಳಲ್ಲಿ ಯುರೋಪಿಗೆ ಮುಟ್ಟುತ್ತಿರುವ ಗ್ಯಾಸ್ ಹರಿವು ನಿಲ್ಲಿಸುತ್ತಾರೆ!

ಈ ಆದೇಶ ಪಾಲನೆ ಸಾಧ್ಯವೇ ಇಲ್ಲ, ಇದು ಬ್ಲಾಕ್ ಮೇಲ್ ಎಂದೆಲ್ಲ ಯುರೋಪ್ ಪ್ರತಿಕ್ರಿಯಿಸಿದೆಯಾದರೂ, ಪುಟಿನ್ ಪಟ್ಟು ಹಿಡಿದಿದ್ದೇ ಆದರೆ ಯುರೋಪಿಗೆ ಮತ್ಯಾವ ದಾರಿಯೂ ಇಲ್ಲ.

ನಿಜ. ಗ್ಯಾಸ್ ವ್ಯಾಪಾರದಿಂದಲೇ ದೊಡ್ಡಮಟ್ಟದಲ್ಲಿ ಆದಾಯ ಪಡೆಯುತ್ತಿರುವ ರಷ್ಯ ದುಡ್ಡಿಲ್ಲದೇ ಒಣಗಿಹೋಗುತ್ತದೆ. ಆದರೆ, ಅದಕ್ಕೂ ಮೊದಲು ಗ್ಯಾಸ್ ಇಲ್ಲದೇ ಯುರೋಪಿನ ದೇಶಗಳಲ್ಲಿ ಕೋಲಾಹಲವೇ ಸೃಷ್ಟಿಯಾಗಿಬಿಡುವ ಮಹಾ ಅಪಾಯವಿದೆ. ಏಕೆಂದರೆ ಯುರೋಪಿನ ಶೇ.40ರಷ್ಟು ಗ್ಯಾಸ್ ರಷ್ಯದಿಂದಲೇ ಬರುವಂಥದ್ದು. ಉಕ್ರೇನ್ ಮೇಲೆ ರಷ್ಯ ಆಕ್ರಮಣ ಮಾಡಿದ ಬೆನ್ನಲ್ಲೇ ಜರ್ಮನಿ ಸೇರಿದಂತೆ ಇತರ ದೇಶಗಳೆಲ್ಲ ತಾವು ರಷ್ಯ ಗ್ಯಾಸ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವುದಕ್ಕೆ ಪರ್ಯಾಯ ಮಾರ್ಗಗಳನ್ನು ನೋಡುತ್ತಿರುವುದಾಗಿ ಹೇಳಿದ್ದರೂ ಅದೆಲ್ಲ ಏಕಾಏಕಿ ಆಗುವ ಕೆಲಸವಲ್ಲ. ಯುರೋಪಿನ ಚಳಿ ದೇಶಗಳಿಗೆ ಗ್ಯಾಸ್ ಸಂಪರ್ಕ ನಿಂತುಹೋದರೆ ಇಡೀ ವ್ಯವಸ್ಥೆಯೇ ಕುಸಿದು ನಾಗರಿಕ ಸಂಘರ್ಷವೇ ಆರಂಭವಾದರೂ ಆಶ್ಚರ್ಯಪಡಬೇಕಿಲ್ಲ.

ಈ ವರ್ಷ ಅದಾಗಲೇ 800 ಮಿಲಿಯನ್ ಯುರೋ ಹಣವನ್ನು ರಷ್ಯದಿಂದ ಗ್ಯಾಸ್ ಖರೀದಿಗೋಸ್ಕರ ವ್ಯಯಿಸಿದೆ ಯುರೋಪ್. ಇವಿಷ್ಟೂ ಹಣ ರುಬೆಲ್ಸ್ ಕರೆನ್ಸಿಗೆ ಪರಿವರ್ತಿತವಾದರೆ ಆ ಕರೆನ್ಸಿಗೆ ಇನ್ನಿಲ್ಲದ ಬಲ ಬಂದುಬಿಡುತ್ತದೆ.

ಯಾವ ಗಜ್ಪ್ರೊಮ್ ಬ್ಯಾಂಕಿಗೆ ಪಾಶ್ಚಾತ್ಯ ಜಗತ್ತು ನಿರ್ಬಂಧ ಹೇರಿತ್ತೋ ಅದನ್ನೇ ಗ್ಯಾಸ ವ್ಯವಹಾರದ ಹಣಕಾಸು ನಿರ್ವಹಣೆ ಮಧ್ಯವರ್ತಿಯಾಗಿಸಿದ್ದಾರೆ ಪುಟಿನ್. ರಷ್ಯದಿಂದ ಗ್ಯಾಸ್ ಖರೀದಿಸುವವರು ಈ ಬ್ಯಾಂಕಿನ ನಿರ್ದಿಷ್ಟ ಖಾತೆಗೆ ಹಣ ಸಂದಾಯ ಮಾಡಬೇಕು. ನಂತರ ಬ್ಯಾಂಕ್ ಆ ಹಣಕ್ಕೆ ಬದಲಿಯಾಗಿ ರುಬೆಲ್ಸ್ ಕರೆನ್ಸಿಯನ್ನು ಖರೀದಿಸುತ್ತದೆ. ಅದನ್ನು ಮತ್ತೊಂದು ಖಾತೆಗೆ ಗ್ಯಾಸ್ ಖರೀದಿದಾರರು ಹಾಕಬೇಕು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!