ಆ.10ರಿಂದ ರಾಘವೇಂದ್ರ ಶ್ರೀಗಳ ಆರಾಧನಾ ಮಹೋತ್ಸವ: 7ದಿನಗಳ ಕಾಲ ಅದ್ದೂರಿ ಕಾರ್ಯಕ್ರಮ

ಹೊಸದಿಗಂತ ವರದಿ ರಾಯಚೂರು: 

ಕಲಿಯುಗ ಕಾಮಧೇನು‌ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ 351ನೇ ಆರಾಧನಾ ಮಹೋತ್ಸವ ಆ. 10ರಿಂದ 16ರ ವರೆಗೆ ನಡೆಯಲಿದ್ದು, ಕಳೆದ ಎರಡು ವರ್ಷಕ್ಕಿಂತ ವಿಜೃಂಭಣೆಯಿಂದ ಆಚರಿಸುವುದಾಗಿ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ. ಮಂತ್ರಾಲಯದಲ್ಲಿ ಮಾತನಾಡಿದ ಶ್ರೀಗಳು, ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದ್ದು, ಆರಾಧನಾ‌ ಮಹೋತ್ಸವ ಹಿನ್ನೆಲೆ ಮಠದಲ್ಲಿ ಏಳು ದಿನಗಳ ಕಾಲ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಆಗಸ್ಟ್ 12ರಂದು ಪೂರ್ವಾರಾಧನೆ ಕಾರ್ಯಕ್ರಮ‌, ಅಂದು ಸಂಜೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ‌ ಹಾಗೂ ಗ್ರಂಥ ಬಿಡುಗಡೆ ನಡೆಯಲಿದೆ. ಆಗಸ್ಟ್ 13ರಂದು ಮಧ್ಯಾರಾಧನೆ ಹಿನ್ನೆಲೆ ತಿರುಪತಿಯಿಂದ ಬರುವ ಶೇಷ ವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಗುವುದು. ಆಗಸ್ಟ್ 14ರಂದು ಉತ್ತರಾ ರಾಧನೆಯಂದು ಮಹಾರಥೋತ್ಸವ ನಡೆಯಲಿದೆ. ಆಗ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ ಮಾಡಲಾಗುವುದು.

ತುಂಗಭದ್ರಾ ನದಿಯಲ್ಲಿ ನೀರಿನ‌ ಪ್ರಮಾಣ ಹೆಚ್ಚಾಗಿರುವುದರಿಂದ ಈ ಬಾರಿ ನದಿ ಸ್ನಾನಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ನದಿ ತಟದಲ್ಲಿ ಸ್ನಾನಘಟ್ಟದ ವ್ಯವಸ್ಥೆ ಮಾಡಲಾಗಿದೆ. ಆರಾಧನಾ ಮಹೋತ್ಸವ ಹಿನ್ನೆಲೆ ವಿವಿಧ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದ್ದು, ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಸತಿ, ಆರೋಗ್ಯ, ಸಾರಿಗೆ, ಕುಡಿಯುವ ನೀರು ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮಠಕ್ಕೆ ಕಾಣಿಕೆ, ದೇಣಿಗೆ ಸಂಗ್ರಹಿಸಲು ಯಾವುದೇ ಖಾಸಗಿ ವ್ಯಕ್ತಿಗಳನ್ನು ನೇಮಿಸಿಲ್ಲ. ಭಕ್ತರು ನೇರವಾಗಿ ಅಥವಾ ಆನ್ ಲೈನ್ ಮೂಲಕ ಹಣ ನೀಡಿ ಅಧಿಕೃತ ರಸೀದಿ ಪಡೆಯಬೇಕೆಂದು ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!