ಮೋದಿ ಕುರಿತು ರಾಹುಲ್ ಗಾಂಧಿ ಹೇಳಿಕೆ: ಕಾಂಗ್ರೆಸ್‌ನ ಕೀಳು ಮಟ್ಟದ ಸಂಸ್ಕೃತಿ ಎತ್ತಿ ತೋರಿಸುತ್ತಿ ಎಂದ ಸಚಿವ ಖೂಬಾ

ಹೊಸದಿಗಂತ ವರದಿ, ಮೈಸೂರು:

ಪ್ರಧಾನಿ ನರೇಂದ್ರಮೋದಿಯವರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯು ಕಾಂಗ್ರೆಸ್‌ನ ಕೀಳು ಮಟ್ಟದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಿಡಿಕಾರಿದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದ ಪ್ರಭಾವಿ ನಾಯಕರಾಗಿರುವ ಪ್ರಧಾನಿ ನರೇಂದ್ರಮೋದಿಯವರ ವಿಚಾರದಲ್ಲಿ ರಾಹುಲ್ ಗಾಂಧಿ ಬಳಸಿರುವ ಶಬ್ದ, ಪದಗಳು ಅವರ ಯೋಗ್ಯತೆಯನ್ನು ಎತ್ತಿ ತೋರಿಸುತ್ತದೆ. ಇದು ಕಾಂಗ್ರೆಸ್ ನಾಯಕರ ಮಾನಸಿಕತೆ ಯಾವ ರೀತಿಯಿದೆ ಎಂಬುದನ್ನು ತೋರಿಸುತ್ತದೆ. ಅಧಿಕಾರಕ್ಕಾಗಿ ಯಾರನ್ನೂ ಎಷ್ಟು ಕೀಳುಮಟ್ಟಕ್ಕೆ ಇಳಿದು ಟೀಕೆ ಮಾಡುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ಇಂತಹ ಸಂಸ್ಕೃತಿಯಿoದಲೇ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಕ್ಷೀಣಿಸುತ್ತಿದೆ. ಜಾಗತಿಕ ನಾಯಕರಾಗಿರುವ ಪ್ರಧಾನನರೇಂದ್ರ ಮೋದಿಯವರನ್ನು ಟೀಕಿಸಿರುವ ರಾಹುಲ್ ಗಾಂಧಿಗೆ ನಿಜಕ್ಕೂ ಬುದ್ದಿ ಎಂಬುದು ಇದೆಯಾ ಎಂದು ಪ್ರಶ್ನಿಸಿದರು.

ಬಿಜೆಪಿ ಪ್ರತಿ ಚುನಾವಣೆಯಲ್ಲೂ ಅನೇಕ ತಂತ್ರಗಾರಿಕೆಯನ್ನು ಮಾಡುತ್ತ ಬಂದಿದೆ. ಬರುವ ಲೋಕಸಭೆ ಚುನಾವಣೆಯ ವಿಚಾರದಲ್ಲೂ ಪಕ್ಷದ ವರಿಷ್ಠರು ಉತ್ತಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸದ್ಯ ನಡೆದಿರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಫಲಿತಾಂಶ ಸಿಗಲಿದೆ. ರಾಜಸ್ಥಾನ,ಮಧ್ಯಪ್ರದೇಶ, ಛತ್ತೀಸಗಡದಲ್ಲಿ ಬಿಜೆಪಿಗೆ ಭಾರೀ ಬಹುಮತ ಸಿಗಲಿದೆ. ತೆಲಂಗಾಣದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಬರಪರಿಹಾರ ಕೊಡಿಸುತ್ತೇವೆ;
ರಾಜ್ಯದಲ್ಲಿ ಬರಗಾಲ ಸ್ಥಿತಿಯಿಂದಾಗಿ ಬೆಳೆ ನಷ್ಟವಾಗಿದೆ. ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ನೀಡಬೇಕಾಗಿರುವ ಪೂರ್ಣ ಪರಿಹಾರವನ್ನು ಕೊಡಿಸುತ್ತೇವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು. ಈಗಾಗಲೇ ಕೇಂದ್ರದಿoದ ಅಧಿಕಾರಿಗಳ ತಂಡವನ್ನು ಕರ್ನಾಟಕ ರಾಜ್ಯಕ್ಕೆ ಕಳುಹಿಸಿ, ಬರ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಉದಾರವಾಗಿದೆ. ಕೇಂದ್ರ ಸರ್ಕಾರ ಸರಿಯಾದ ಮಾರ್ಗದಲ್ಲಿ ವರದಿ ಸಲ್ಲಿಸಿದರೆ, ಶೇ ನೂರರಷ್ಟು ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಕಳೆದ ಜೂನ್ ತಿಂಗಳಲ್ಲಿಯೇ ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದ್ದೇವು. ಆಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಬರಗಾಲವನ್ನು ಎದುರಿಸಲು ಆಗಿನಿಂದಲೇ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಬರಪರಿಹಾರಕ್ಕೆಂದು ಸಾಕಷ್ಟು ಅನುದಾನವನ್ನು ಹೊಂದಿಸಿಕೊಳ್ಳಬೇಕಾಗಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಬರಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ನಿತ್ಯವೂ ಆರೋಪ ಮಾಡಿ, ದೂಷಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ರಸಗೊಬ್ಬರದ ಉತ್ಪಾಧನೆ ಹಾಗೂ ಪೂರೈಕೆ ಸಾಕಷ್ಟು ಪ್ರಮಾಣದಲ್ಲಿದೆ. ಹಾಗಾಗಿ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ತೊಂದರೆ, ಅಭಾವವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!