ಹೊಸದಿಗಂತ ವರದಿ, ಚಿಕ್ಕಮಗಳೂರು:
ಮಳೆ ಮತ್ತು ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಕೀಟ ಬಾಧೆ ತಗುಲುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ರೋಗ ಮತ್ತು ಕೀಟಗಳ ಹತೋಟಿಗೆ ಕ್ರಮ ಕೈಗೊಳ್ಳಲು ತೋಟಗಾರಿಕೆ ಇಲಾಖೆ ಸಲಹೆ ಮಾಡಿದೆ.
ಮಾವಿನ ಹೂ ಬಿಡುವ ಹಾಗೂ ಕಾಯಿಯಾಗುವ ಸಮಯದಲ್ಲಿ ಮಳೆ ಹಾಗೂ ಮೋಡದ ವಾತಾವರಣವಿದ್ದಲ್ಲಿ ಬೂದಿ ರೋಗ ಹಾಗೂ ಜಿಗಿ ಹುಳುವಿನ ಭಾಧೆ ಹೆಚ್ಚು ಇದರ ಹತೋಟಿಗಾಗಿ 1 ಗ್ರಾಂ ಕಾರ್ಬನ್ಡೈಜಿಮ್ 50 ಡಬ್ಲುಪಿ ಅಥವಾ ಮೀ .ಲೀ ಹೆಕ್ಸಾಕೋನೋಜೋಲ್ 5 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ಮಾಡಲಾಗಿದೆ.
ಪೇರಲಹಣ್ಣಿಗೆ ಜಿಗಿ ಹುಳುವಿನ ಹತೋಟಿಗಾಗಿ 0.25 ಮಿ.ಲೀ ಇಮಿಡಾಕ್ಲೋಪ್ರಿಡ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕಜ್ಜಿ ತಿಗಣಿಯ ಹತೋಟಿಗಾಗಿ ಹೂ ಬಿಡುವ ಸಮಯದಲ್ಲಿ 1.7 ಮಿ.ಲೀ ಡೈಮಿಥೋಯೆಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಪಪ್ಪಾಯಬೆಳೆಗೆ ಮಳೆ ಹಾಗೂ ಮೋಡ ಕವಿದ ವಾತಾವರಣವಿದ್ದಲ್ಲಿ ಪಪ್ಪಾಯ ಬೆಳೆಯಲ್ಲಿ ಬೂದಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇದರ ಹತೋಟಿಗಾಗಿ 1 ಗ್ರಾಂ ಕಾರ್ಬನ್ ಪ್ರತಿ ಲೀಟಟ್ ನೀರಿಗೆ ಮತ್ತು 2 ಮಿಲೀ ಡೈಕೊಫಾಲ್ 20 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಅಡಿಕೆ ಬೆಳಗೆ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ನೀರು ಸರಾಗವಾಗಿ ಹರಿದು ಹೋಗುವ ಹಾಗೆ ನೋಡಿಕೊಳ್ಳಬೇಕು.
ಮೆಣಸಿನಕಾಯಿಗೆ ಥ್ರಿಪ್ಸ್ ಕೀಟದ ಹತೋಟಿಗಾಗಿ 1.7 ಮಿ.ಲೀ ಡೈಮಿಥೋಯೆಟ್ ಅಥವಾ 1 ಗ್ರಾಂ ಅಸಿಫೇಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಈರುಳ್ಳಿ ಬೆಳೆಗೆ ಮಜ್ಜಿಗೆ ರೋಗದ ನಿರ್ವಹಣೆಗೆ 2 ಮಿ.,ಲೀ ಲೀಟರ್ ಡೈಫೆನಕೊನೊಜೋಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಟೊಮ್ಯಾಟೊ ಬೆಳೆಗೆ ನೆಲದಿಂದ 1 ಅಡಿ ಎತ್ತರದವರೆಗೆ ಎಲ್ಲಾ ಎಲೆಗಳನ್ನು ತೆಗೆದು ಹಾಕುವುದರಿಂದ ಬೆಳೆಯಲ್ಲಿ ಸರಾಗವಾಗಿ ಗಾಳಿಯಾಡುವುದರಿಂದ ಅಂಗಮಾರಿ ರೋಗದ ಉಲ್ಬಣವನ್ನು ತಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್, ವಿಷಯ ತಜ್ಞ ಯಶವಂತ್ ಕುಮಾರ್ ದೂ.ಸಂ: 08262-295043, 8618186586 ಅಥವಾ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.