ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದ.ಆಫ್ರಿಕಾ ಮತ್ತು ಭಾರತೀಯ ವನಿತೆಯರ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಅತ್ಯಂತ ರೋಚಕ ಘಟ್ಟದಲ್ಲಿರುವಾಗ ಮಳೆ ಸುರಿದುದರಿಂದ ಪಂದ್ಯವು ನಿಲ್ಲುವಂತಾಯಿತು. ಬಳಿಕ ಡಕ್ವತ್ ಲೂಯಿಸ್ ನಿಯಮದ ಅಡಿಯಲ್ಲಿ ದ.ಆಫ್ರಿಕಾವನ್ನು ವಿಜಯಿಯೆಂದು ಘೋಷಿಸಲಾಯಿತು.
ಮಳೆಯಿಂದಾಗಿ ಪಂದ್ಯ ನಿಂತಾಗ ದ.ಆಫ್ರಿಕಾ 21 ಎಸೆತಗಳಿಂದ 26 ರನ್ ತೆಗೆಯಬೇಕಾಗಿತ್ತು. ಪಂದ್ಯವನ್ನು ಯಾರೂ ಗೆಲ್ಲಬಹುದಾದ ರೋಚಕ ಸ್ಥಿತಿಯಿತ್ತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮ ಅಳವಡಿಸಿದ್ದರಿಂದ ದ.ಆಫ್ರಿಕಾವು ಗುರಿಗಿಂತ 6 ರನ್ಗಳನ್ನು ಹೆಚ್ಚು ಮಾಡಿದ್ದರಿಂದ ಅವರನ್ನು ವಿಜಯಿಯೆಂದು ಘೋಷಿಸಲಾಯಿತು.
ದ.ಆಫ್ರಿಕಾದ ಗೆಲುವಿಗೆ ಮುನ್ನಡೆ ಬರೆದವರು ಲಿಜೆಲ್ ಲೀ. ಅವರು 131 ಎಸೆತಗಳಿಂದ 132 ರನ್ ಗಳಿಸಿ ಔಟಾಗದೆ ಉಳಿದಿದ್ದರಲ್ಲದೆ ತಮ್ಮ ತಂಡಕ್ಕೆ ಗೆಲುವು ತಂದುಕೊಡುವ ಉಜ್ವಲ ಸಾಧ್ಯತೆಯನ್ನೂ ಹೊಂದಿದ್ದರು. ಭಾರತವು ದ.ಆಫ್ರಿಕಾದ ಇತರ ಆಟಗಾರರ ಮೇಲೆ ನಿಯಂತ್ರಣ ಹೇರಲು ಸಫಲರಾದರೂ ಲೀ ಮಾತ್ರ ನಿರಾಯಾಸವಾಗಿ ರನ್ ಗಳಿಸುತ್ತಾ ಸಾಗಿದ್ದರು.
ಇದಕ್ಕೆ ಮುನ್ನ ಭಾರತವು 50 ಓವರುಗಳಲ್ಲಿ 5 ವಿಕೆಟಿಗೆ 248 ರನ್ ಗಳಿಸಿತ್ತು. ಪೂನಮ್ ರಾವತ್ 77 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರುದಾರರಾದರು.
ಇದೀಗ ದ.ಆಫ್ರಿಕಾ ಮಹಿಳೆಯರು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಾರೆ.
ಸಂಕ್ಷಿಪ್ತ ಸ್ಕೋರು: ಭಾರತ ಮಹಿಳೆಯರು 5 ವಿಕೆಟಿಗೆ 248 (ಪೂನಮ್ ರಾವತ್ 77, ಮಿಥಾಲಿ ರಾಜ್ 36, ಹರ್ಮನ್ಪ್ರೀತ್ ಕೌರ್ 36, ದೀಪ್ತಿ ಶರ್ಮಾ ಅಜೇಯ 36)
ದ.ಆಫ್ರಿಕಾ ವನಿತೆಯರು 46.3 ಓವರುಗಳಲ್ಲಿ 4 ವಿಕೆಟಿಗೆ 223 (ಲಿಜೆಲ್ ಲೀ ಔಟಾಗದೆ 132, ಡು ಪ್ರೀಜ್ 37)