ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು, ಹಲವು ರಾಜ್ಯಸಭಾ ಸದಸ್ಯರು ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದರು.
ಕೆಲ ವರ್ಷಗಳ ಹಿಂದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಮಸೂದೆ ಮಂಡಿಸಲು ಪ್ರಯತ್ನಗಳು ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಂಸತ್ ಸದಸ್ಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮಾತನಾಡಿ, ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಸದನದ ಮಹಿಳಾ ಸದಸ್ಯರು ನೀಡಿದ ಸೇವೆಗಳನ್ನು ಶ್ಲಾಘಿಸಿದರು. ಮಾತು ಮತ್ತು ಕೃತಿ ಎರಡರಲ್ಲೂ ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯ ವ್ಯಕ್ತಪಡಿಸಲು ಅನುವು ಮಾಡಿಕೊಡುವ ವಾತಾವರಣವನ್ನು ನಾವು ಸೃಷ್ಟಿಸಬೇಕು ಎಂದು ಹೇಳಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದೆ ಎಂದು ಕಾಂಗ್ರೆಸ್ ಸದಸ್ಯೆ ಛಾಯ ವರ್ಮಾ ಇದೇ ವೇಳೆ ನೆನಪಿಸಿಕೊಂಡರು. ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿಯೂ ಮಹಿಳೆಯರಿಗೆ ಇದೇ ರೀತಿಯ ಮೀಸಲಾತಿ ನೀಡಬೇಕೆಂದು ಅವರು ಒತ್ತಾಯಿಸಿದರು.
ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ತ್ರಿವಳಿ ತಲಾಖ್ ವಿರುದ್ಧದ ಕಾನೂನು ಜಾರಿಗೊಳಿಸಿದೆ ಎಂದು ಎಂದು ಬಿಜೆಪಿ ಸದಸ್ಯ ಸರೋಜ್ ಪಾಂಡೆ ಹೇಳಿದರು.