ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ರಾಮ್ ಸೇತು’ ರಾಷ್ಟ್ರೀಯ ಸ್ಮಾರಕ: ಘೋಷಣೆಗೆ ವಿಹಿಂಪ ಕೇಂದ್ರೀಯ ಮಂಡಳಿ ಸಭೆ ಆಗ್ರಹ

ಹೊಸ ದಿಗಂತ ವರದಿ, ಹರಿದ್ವಾರ:

‘ರಾಮ್ ಸೇತು’ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸಬೇಕು ಹಾಗೂ ದೇಶದ ಎಲ್ಲ ಮಠ-ಮಂದಿರಗಳನ್ನು ಸರಕಾರದ ನಿಯಂತ್ರಣದಿಂದ ಕೈಬಿಡಬೇಕೆಂದು ವಿಶ್ವ ಹಿಂದು ಪರಿಷತ್‌ನ ಕೇಂದ್ರೀಯ ಮಾರ್ಗದರ್ಶಿ ಮಂಡಳಿಯ ಸಂತರ ಸಭೆ ತೀರ್ಮಾನಿಸಿದೆ.
ಇಲ್ಲಿನ ಅಖಂಡ್ ಪರಂಧಾಮ ಆಶ್ರಮದಲ್ಲಿ ಶುಕ್ರವಾರ ಜರಗಿದ ವಿಹಿಂಪ ಕೇಂದ್ರೀಯ ಮಾರ್ಗದರ್ಶಿ ಮಂಡಳಿ ಸಭೆಯನ್ನು ಅಖಂಡ ಪರಂಧಾಮದ ಅಧ್ಯಕ್ಷ ಯುಗಪುರುಷ್ ಸ್ವಾಮಿ ಪರಮಾನಂದ್ ಮಹಾರಾಜ್, ನಿರ್ವಾಣಿ ಪೀಠಾಧೀಶ್ವರ ಸ್ವಾಮಿ ವಿಶೋಕಾನಂದ್ ಭಾರತಿ, ಸ್ವಾಮಿ ಅವಿಚಲದಾಸ್, ಸ್ವಾಮಿ ಜ್ಞಾನಾನಂದ, ಸ್ವಾಮಿ ಜಿತೇಂದ್ರನಂದ್ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಜಗದ್ಗುರು ಶಂಕರಾಚಾರ್ಯ ಸ್ವಾಮಿ ವಾಸುದೇವನಂದ್ ಸರಸ್ವತಿ ಮಹಾರಾಜ್ ವಹಿಸಿದ್ದರು. ಸಮಾರಂಭದಲ್ಲಿ ಹಾಜರಿದ್ದ ಎಲ್ಲ ಸಂತರು ದೇವಾಲಯಗಳನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ನಿರ್ಣಯವನ್ನೂ ಅಂಗೀಕರಿಸಲಾಯಿತು. ಸ್ವಾಧೀನಪಡಿಸಿಕೊಂಡ ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ನಿಲ್ಲಿಸಬೇಕೆಂದು ನಿರ್ಧರಿಸಲಾಯಿತು. ಅಲ್ಲದೇ ಸಾರ್ವಜನಿಕ ಜಾಗೃತಿಗಾಗಿ ಅಭಿಯಾನ ನಡೆಸಲು ಸಹ ನಿರ್ಧರಿಸಲಾಯಿತು. ಲವ್ ಜಿಹಾದ್ ಮತ್ತು ಮತಾಂತರದ ಕುರಿತು ವ್ಯಾಪಕವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ವಿಹಿಂಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಂಡಿಸಿದರು. ರಾಮ ಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಣೆ ಸಹಿತ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಮತಾಂತರ ಮಾಡುವ ವಿಷಯಗಳ ಬಗ್ಗೆ ಚರ್ಚಿಸಬೇಕು. ಮದ್ರಾಸ್ ಹೈಕೋರ್ಟ್ ಪಳನಿಯ ಕಾರ್ತಿಕೇಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಆದೇಶವನ್ನು ಸಭೆ ಸ್ವಾಗತಿಸಿದೆ.
ಅಯೋಧ್ಯಾದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀರಾಮ ಮಂದಿರದ ಪ್ರಗತಿ ಮತ್ತು ಪ್ರಸ್ತುತ ಸ್ಥಿತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಹಿಂಪ ಕೇಂದ್ರ ಉಪಾಧ್ಯಕ್ಷ ಚಂಪತ್ ರಾಯ್ ನೀಡಿದರು. ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ವಿಹಿಂಪ ಕೇಂದ್ರ ಸಂಘಟನಾ ಕಾರ್ಯದರ್ಶಿ ವಿನಾಯಕ ರಾವ್ ದೇಶಪಾಂಡೆ ಮಾಹಿತಿ ನೀಡಿದರು.
ದೇಶದಲ್ಲಿ ಅನಧಿಕೃತ ಸ್ಮಶಾನಗಳು, ಸಮಾಧಿಗಳನ್ನು ನಿಷೇಧಿಸಬೇಕು, ದೇಶದ ಮಠಗಳು ಮತ್ತು ದೇವಾಲಯಗಳ ಮೇಲಿನ ಸರಕಾರದ ತೆರಿಗೆಯನ್ನು ರದ್ದುಪಡಿಸಬೇಕು. ಗೋವು, ಜಲ ಸಂರಕ್ಷಣೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುವ ಅಗತ್ಯವನ್ನು ಒತ್ತಿಹೇಳಬೇಕೆಂದು ಸಂತರ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಸಭೆಯನ್ನು ವಿಹಿಂಪ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ತಿವಾರಿ ಸಂಯೋಜಿಸಿದ್ದರು. ವಿಹಿಂಪದ ದಿನೇಶ್ ಚಂದ್ರ, ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮೊದಲಾದವರಿದ್ದರು. ದೇಶದ ವಿವಿಧೆಡೆಗಳಿಂದ ಸಂತರು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss