Friday, August 12, 2022

Latest Posts

ರಾಮಮಂದಿರ ಕಟ್ಟುವುದು ಮುಖ್ಯವಲ್ಲ, ಮುಂದಿನ ತಲೆಮಾರುಗಳಿಗೂ ಉಳಿಸಿಕೊಂಡು ಹೋಗುವುದು ಮುಖ್ಯ: ಪೇಜಾವರ ಶ್ರೀ

ಹೊಸ ದಿಗಂತ ವರದಿ,  ಮೈಸೂರು:

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ನಿರ್ಮಿಸುವುದು ಮುಖ್ಯವಲ್ಲ, ನಿರ್ಮಿಸಿದ ಮಂದಿರವನ್ನು ಮುಂದಿನ ತಲೆಮಾರಿಗಳಿಗೂ ನಮ್ಮಲ್ಲಿಯೇ ಉಳಿಸಿಕೊಂಡು ಹೋಗುವುದು ಮುಖ್ಯವಾಗಬೇಕಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ್ವರ ಪ್ರಸನ್ನತೀರ್ಥ ಸ್ವಾಮಿ ತಿಳಿಸಿದರು.
ಭಾನುವಾರ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಸಿಂಧೂರ ಕನ್ವೇಷನ್ ಹಾಲ್ ರಲ್ಲಿ  ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಪ್ರ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಸ್ಥಳವನ್ನು ಹಿಂದುಗಳ ಬಳಿಯೇ ಉಳಿಸಿಕೊಳ್ಳಲು ಶತ, ಶತಮಾನಗಳಿಂದಲೂ ನಮ್ಮ ಹಿರಿಯರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅದರ ಫಲವಾಗಿ ಈಗ ಆ ಸ್ಥಳ ಹಿಂದುಗಳಿಗೆ ಸಿಕ್ಕಿದೆ. ಅಲ್ಲಿ ಶ್ರೀರಾಮಮಂದಿರನ ಭವ್ಯ ಮಂದಿರವನ್ನು ನಿರ್ಮಿಸುವುದಕ್ಕಾಗಿ 1500 ಕೋಟಿರೂ ವೆಚ್ಚವಾಗುವುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2100 ಕೋಟಿರೂ ಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ. ಅಲ್ಲಿ ಭವ್ಯವಾದ ಶ್ರೀರಾಮಮಂದಿರವೊAದನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದರ ಬೆನ್ನ ಹಿಂದೆಯೇ ಶ್ರೀರಾಮಂದಿರ ಎಷ್ಟು ದಿನಗಳ ಕಾಲ ನಿಮ್ಮ ಬಳಿ ಉಳಿಯುತ್ತೆ, ಮತ್ತೆ ಅದು ನಮಗೆ ಬರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ದೇಶದಲ್ಲಿರುವ ಪ್ರತಿಯೊಬ್ಬ ಹಿಂದವೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ನಿರ್ಮಿಸಲಾಗುವ ಶ್ರೀರಾಮಮಂದಿರ ಅನ್ಯರ ಪಾಲಾಗದಂತೆ ಅದನ್ನು ಉಳಿಸಿ, ಮುಂದಿನ ತಲೆಮಾರಿಗೂ ಉಳಿಸಕೊಡಬೇಕು ಎಂದು ಕಿವಿ ಮಾತು ಹೇಳಿದರು.
ಬ್ರಾಹ್ಮಣ ಸಮುದಾಯ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ಸಮುದಾಯದ ಹೆಣ್ಣು ಮಕ್ಕಳು ಅನ್ಯ ಧರ್ಮಕ್ಕೆ ಮತಾಂತರವಾಗುವ ಕೆಲಸಗಳು, ಅವರನ್ನು ಮತಾಂತರಗೊಳಿಸುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಿವೆ. ಈ ರೀತಿ ಮತಾಂತರವಾದರೆ ಮುಂದಿನ ದಿನಗಳಲ್ಲಿ ಶ್ರೀರಾಮ ಮಂದಿರವನ್ನು ತಮಗೆ ಕೇಳಿ, ವಶಕ್ಕೆ ತೆಗೆದುಕೊಳ್ಳಲು ಮುಂದಾದರೆ, ಆಗ ಪರಿಸ್ಥಿತಿ ತುಂಬಾ ಕಷ್ಟವಾಗಲಿದೆ. ಹಾಗಾಗಿ ಬ್ರಾಹ್ಮಣ ಸಮುದಾಯ ಮಾತ್ರವಲ್ಲ, ಇಡೀ ಹಿಂದು ಸಮುದಾಯದಲ್ಲಿರುವ ಯಾವುದೇ ಒಂದು ಕುಟುಂಬದಿAದಲೂ ಅನ್ಯ ಧರ್ಮಕ್ಕೆ ಒಂದೇ ಒಂದು ಮತಾಂತರ ಕೂಡ ನಡೆಯಬಾರದು, ಅದಕ್ಕೆ ಅವಕಾಶ ಕೊಡಬಾರದು. ಬ್ರಾಹ್ಮಣಿಕೆ ಎಂಬುದನ್ನು ಬದಿಗಿಟ್ಟು, ಸಮಸ್ತ ಹಿಂದುಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ನಡೆಸಬೇಕಾಗಿದೆ ಎಂದು ಕರೆ ನೀಡಿದರು. ಈ ಹಿಂದೆ ಪ್ರತಿಯೊಬ್ಬ ಹಿಂದು, ಅದರಲ್ಲೂ ಬ್ರಾಹ್ಮಣರ ಮನೆಯಲ್ಲಿ ಕಷ್ಟ ಬರಲಿ, ಸುಖ ಬರಲಿ ಎಲ್ಲದಕ್ಕೂ ರಾಮ, ರಾಮ ಎನ್ನುತ್ತಿದ್ದೇವು, ಶ್ರೀರಾಮನ ನಾಮಸ್ಮರಣೆಯನ್ನು ಜಪಿಸುತ್ತಿದ್ದೇವು, ಆದರೆ ಅಂತಹ ಸ್ಮರಣಯೇ ಈಗ ಬ್ರಾಹ್ಮಣ ಕುಟುಂಬದಲ್ಲೂ ಕಾಣೆಯಾಗಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮನ ಮಂದಿರವನ್ನು ರಕ್ಷಣೆ ಮಾಡಬೇಕಾದರೆ, ಪ್ರತಿಯೊಬ್ಬ ಹಿಂದುಗಳು, ಅದರಲ್ಲೂ ಬ್ರಾಹ್ಮಣರು ಶ್ರೀರಾಮನ ಆದರ್ಶಗಳನ್ನು, ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಟ್ಟು, ಅವರು, ಅದನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ,ಪರಕಾಲ ಮಠದ ಶ್ರೀ ಕಾರ್ಯಂ ಆದ ವೆಂಕಟನಾಥನ್, ಶಾಸಕ ಎಸ್.ಎ.ರಾಮದಾಸ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷÀ ಎಚ್.ವಿ ರಾಜೀವ್,ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್,ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ. ಎಸ್. ಶ್ರೀವತ್ಸ, ,ಕರ್ನಾಟಕ ಸರಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಎಂ.ಆರ್.ಬಾಲಕೃಷ್ಣ , ಸಿ.ವಿ.ಗೋಪಿನಾಥ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರುಗಳು, ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss