ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ಮರು ದಿನವೇ ರಸ್ತೆ ಅಪಘಾತದಲ್ಲಿ ಸಂತ್ರಸ್ತ ಬಾಲಕಿಯ ತಂದೆ ಮೃತಪಟ್ಟಿದ್ದಾರೆ.
ಈ ಭಯಾನಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ . ಎರಡು ದಿನಗಳ ಹಿಂದೆ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಸಂತ್ರಸ್ತೆಯ ಗ್ರಾಮದವರೇ ಆದ ಮೂವರು ಅತ್ಯಾಚಾರ ನಡೆಸಿದ್ದರು.
ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂತ್ರಸ್ತೆ ತಂದೆ ಟೀ ತರಲೆಂದು ಆಸ್ಪತ್ರೆ ಹೊರಗಡೆ ಬಂದಾಗ ಅಪಘಾತ ಸಂಭವಿಸಿದೆ. ತಕ್ಷಣ ಕಾನ್ಪುರ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಮೂಹಿಕ ಅತ್ಯಾಚಾರದ ಮುಖ್ಯ ಆರೋಪಿ ಗೋಲು ಯಾದವ್ ತಂದೆ ಕನೌಜ್ ಜಿಲ್ಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಆರೋಪಿ ಗೋಲುನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸಂತ್ರಸ್ತ ಕುಟುಂಬಕ್ಕೆ ಗೊಲು ಯಾದವ್ ಕುಟುಂಬ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಇದೀಗ ಸಂತ್ರಸ್ತೆಯ ತಂದೆ ಮೃತಪಟ್ಟಿರುವುದು ಮತ್ತಷ್ಟು ಅನುಮಾನ ಹುಟ್ಟುಹಾಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಕಾನ್ಪುರ ಪೊಲೀಸ್ ಮುಖ್ಯಸ್ಥ ಡಾ. ಪ್ರೀತಿಂದರ್ ಸಿಂಗ್ ತಿಳಿಸಿದ್ದಾರೆ.