ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಕುಶಾಲನಗರ:
ಶುಂಠಿ ಬೆಳೆದು ಬೆಲೆಯಿಲ್ಲದೆ ಕೈಸುಟ್ಟುಕೊಂಡ ರೈತರು ಇದೀಗ ಸಿಹಿಗೆಣಸು ಬೆಳೆದಿದ್ದು, ದುರಾದೃಷ್ಟಕ್ಕೆ ಗೆಣಸಿನ ಬೆಲೆಯಲ್ಲೂ ದಿಢೀರ್ ಕುಸಿತ ಉಂಟಾಗಿ ಇದೀಗ ಕಂಗಾಲಾಗಿದ್ದಾರೆ.
ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ರೈತರು ಶುಂಠಿ ಕೇನೆ, ಕೆಸ, ಸಿಹಿ ಗೆಣಸು ಸೇರಿದಂತೆ ವಿವಿಧ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಈ ಭಾಗ ಹಾರಂಗಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಹೊಂದಿದ್ದು, ಇದರ ಜೊತೆಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಜೋಳ ಮತ್ತು ಸಿಹಿ ಗೆಣಸು ಬೆಳೆಗಳನ್ನೂ ಈ ಭಾಗದ ರೈತರು ಬೆಳೆಯುತ್ತಿದ್ದಾರೆ.
ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಚಿಕ್ಕ ಅಳುವಾರ, ಹುದುಗೂರು, ಮದಲಾಪುರ, ಸೀಗೆಹೊಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಹೆಚ್ಚಾಗಿ ಈ ಬಾರಿ ಶುಂಠಿ ಮತ್ತು ಸಿಹಿ ಗೆಣಸು ಬೆಳೆಗಳನ್ನು ಬೆಳೆಯಲಾಗಿದೆ. ಆದರೆ ಈ ಬಾರಿ ಈ ವ್ಯಾಪ್ತಿಯಲ್ಲಿ ಬೆಳೆದ ಶುಂಠಿಗೆ ಭಾರೀ ಬೆಲೆ ಕುಸಿತ ಕಂಡಿತ್ತು. ಇದೀಗ ಈ ವ್ಯಾಪ್ತಿಯ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆದ ಸಿಹಿ ಗೆಣಸಿನ ಬೆಲೆಯೂ ದಿಢೀರ್ ಕುಸಿತಕಂಡಿದೆ.
ಕಳೆದ ಎರಡು ತಿಂಗಳ ಹಿಂದೆ ಸಿಹಿ ಗೆಣಸಿನ ಬೆಲೆ ಕೆ ಜಿ.ಗೆ 8 ರಿಂದ 10 ರೂವರೆಗೆ ಇತ್ತು. ಅದರೆ ಕೊರೋನಾ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತರ ಸಿಹಿಗೆಣಸಿನ ಬೆಲೆ ಕೆಜಿಗೆ ಕೇವಲ 2 ರೂ ಗಳಿಗೆ ಇಳಿದಿದೆ.
ಈ ಬಾರಿ ಕೊರೀನಾದಿಂದ ಲಾಕ್ ಡೌನ್ ಅಗುವುದಿಲ್ಲ ಎಂಬ ನಂಬಿಕೆಯಲ್ಲಿ ಅನೇಕ ರೈತರದ್ದಾಗಿತ್ತು. ಸ್ವತಃ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಿಕೊಂಡು ಬೇಸಾಯ ಮಾಡಿದ್ದರು. ಅದರ ಬಳ್ಳಿಯನ್ನು ಹಸುಗಳಿಗೆ ಆಹಾರವಾಗಿಯೂ ಬಳಕೆ ಮಾಡಲಾಗುತ್ತಿದ್ದು,
ಈ ವ್ಯಾಪ್ತಿಯ ನೂರಾರು ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ಹೆಚ್ಚಾಗಿ ಸಿಹಿ ಗೆಣಸು ಬಳ್ಳಿಯನ್ನು ಹಸುಗಳಿಗೆ ಹಾಕಿ ಸಾಕಾಣಿಕೆ ಮಾಡುತ್ತಿದ್ದಾರೆ.
ಸಿಹಿ ಗೆಣಸು ನೆಟ್ಟು ಎರಡೂ ತಿಂಗಳುಗಳು ಕಳೆಯುತ್ತಾ ಬರುವಷ್ಟರಲ್ಲಿ ಬೆಳೆ ಉತ್ತಮವಾಗಿ ಬರುತ್ತದೆ .ಅದರೆ ಬೆಳೆ ಬಂದ ಕೆಲ ದಿನಗಳಲ್ಲಿ ಅದನ್ನು ಕೀಳದಿದ್ದರೆ ಗೆಡ್ಡೆಗೆ ಹುಳ ಬೀಳುತ್ತದೆ.
ಆದರೆ ಹೆಬ್ಬಾಲೆ, ಮರೂರು, ಸೀಗೆಹೊಸೂರು, ಹುದುಗೂರು, ವ್ಯಾಪ್ತಿಯಲ್ಲಿ ಅನೇಕ ರೈತರು ಸಿಹಿ ಗೆಣಸು ಹಾಳಾಗುವ ಬದಲು ರೈತರು ಕಡಿಮೆ ಬೆಲೆ ಅದರೂ ಸಹ ಕಿತ್ತು ಮಾರಾಟಕ್ಕೆ ಸಿದ್ಧರಾಗಿದ್ದಾರೆ.
ಮದಲಾಪುರ, ಸೀಗೆಹೊಸೂರು ಹುದುಗೂರು ವ್ಯಾಪ್ತಿಯ ರೈತರಾದ ಕಾಳಪ್ಪ, ರಾಮಣ್ಣ, ಸುರೇಶ, ಚಿಣ್ಣಪ್ಪ ಮತ್ತಿತರರು ಸಿಹಿ ಗೆಣಸು ಬೆಳೆಯನ್ನು ಕಿತ್ತು ಮಾರಾಟ ಮಾಡಲು ಸಿದ್ಧರಾಗಿದ್ದು ಸಮರ್ಪಕವಾದ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಅಲ್ಲದೆ ದೂರದ ಹೊರ ರಾಜ್ಯಗಳಲ್ಲಿ ಸಿಹಿ ಗೆಣಸಿಗೆ ಬೇಡಿಕೆ ಇದ್ದರೂ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ಸಾಗಾಟವಾಗುತ್ತಿಲ್ಲ. ಅಲ್ಲದೆ ಪಕ್ಕದ ಕೇರಳ ರಾಜ್ಯದಲ್ಲಿ ವಿವಿಧ ತಿಂಡಿಗಳಿಗೆ ಹೆಚ್ಚು ಉಪಯೋಗಿಸುತ್ತಿದ್ದರೂ ಕೊಳ್ಳುವವರು ಬರುತ್ತಿಲ್ಲಾ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.