Friday, July 1, 2022

Latest Posts

ವಜಾಗೊಂಡ ಸಾರಿಗೆ ಸಿಬ್ಬಂದಿಗಳ ಮರು ನಿಯುಕ್ತಿ: ಸಚಿವ ಬಿ.ಶ್ರೀರಾಮುಲು

ಹೊಸದಿಗಂತ ವರದಿ,ಗದಗ :

ಕಳೆದ ಎಂಟು ತಿಂಗಳ ಹಿಂದೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳನ್ನು ವಜಾಗೊಳಿಸಲಾಗಿತ್ತು. ಆದರೆ, ಇದೀಗ ಮಾನವೀಯತೆ ಹಾಗೂ ಅವರ ಕುಟುಂಬದವರ ಹಿತದೃಷ್ಟಿಯಿಂದ ವಜಾಗೊಂಡಿರುವ ಸಿಬ್ಬಂದಿಗಳನ್ನು ನಾಲ್ಕು ವಾರಗಳ ಒಳಗೆ ಸೇವೆಗೆ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹೊಸವರ್ಷಕ್ಕೆ ಸಿಹಿ ಸುದ್ದಿ ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ನೌಕರರನ್ನು ಮರು ನಿಯುಕ್ತಿ ಮಾಡುವಂತೆ ನಾಲ್ಕು ಸಾರಿಗೆ ಸಂಸ್ಥೆಯ ಎಂಡಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ವಜಾಗೊಂಡಿರುವ ಸಿಬ್ಬಂದಿಗಳು ಕೋರ್ಟ್ ಮೆಟ್ಟಿಲೇರಿರುವ ಕಾರಣ ಕೆಲ ಕಾನೂನಿನ ತೊಡಕಾಗಿದೆ. ಹೀಗಾಗಿ ಲೋಕ ಅದಾಲತ್ ಮೂಲಕ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಹೇಳಿದ ಅವರು, ಖಾಲಿ ಕುಳಿತಿರುವ ರಾಜಕಾರಣಿಗಳು ತಪ್ಪು ದಾರಿಗೆ ಎಳೆದು ತರುತ್ತಾರೆ. ಹೀಗಾಗಿ ಸಾರಿಗೆ ನೌಕರರು ಇಂತಹ ಹೋರಾಟಗಳಲ್ಲಿ ಪಾಲ್ಗೊಳ್ಳಬಾರದು. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಸಚಿವ ಬಿ.ಶ್ರೀರಾಮುಲು ಕಿವಿಮಾತು ಹೇಳಿದರು.
ಎಂಇಎಸ್ ಮಹಾ ಎಡವಟ್ಟು ಸಂಘವಾಗಿದ್ದು, ಅವರ ಪುಂಡಾಟಕ್ಕೆ ಹಾಗೂ ಹೇಡಿ ಕೃತ್ಯಗಳಿಗೆ ರಾಜ್ಯ ಸರ್ಕಾರ ಗೂಂಡಾಕಾಯ್ದೆ ಹಾಕುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ಕಾರ ಪ್ರತ್ಯುತ್ತರ ನೀಡುತ್ತಿದೆ. ಅಲ್ಲದೇ, ಎಂಇಎಸ್ ಬ್ಯಾನ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ತಜ್ಞರ ಜೊತೆ ಪರಾಮರ್ಶಿಸುತ್ತಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕನ್ನಡ ನಾಡು-ನುಡಿ ಜಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಸಂಗೊಳ್ಳಿ ರಾಯಣ್ಣ ಅವರ ವಿಗ್ರಹವನ್ನು ಧ್ವಂಸಗೊಳಿಸಿರುವವರ ವಿರುದ್ಧ ಕಠಿಣ ಕಾನೂನು ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಎಂಇಎಸ್ ಈ ರೀತಿ ಮಾಡಲು ಬಿಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಕೆಸರೆರಚಾಟ ನಡೆಸುವ ಬದಲು ಪ್ರತಿಯೊಬ್ಬರೂ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಚಿವ ಶ್ರೀರಾಮುಲು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿ ದಂಡಿನ, ಎಸ್.ಎಚ್.ಶಿವನಗೌಡರ ಸೇರಿದಂತೆ ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss