ಟಿವಿಯಲ್ಲಿ ಇಂದಿನಿಂದ ಲಾಕ್ಡೌನ್ ಅನ್ನೋ ಮಾಹಿತಿ ಬಂದಾಗ ತಕ್ಷಣ ಓಡಿದ್ದೇ ದಿನಸಿ ಅಂಗಡಿಗೆ, ಬೇಕಿರುವುದು, ಮುಂದೆ ಬೇಕಾಗಬಹುದು ಎನಿಸಿದ್ದು ಎಲ್ಲವನ್ನೂ ಹೊತ್ತು ತಂದಿದ್ದಾಯ್ತು. ಕೂತು ತಿನ್ನುವವನಿಗೆ ಕುಡಿಕೆ ಹೊನ್ನೂ ಸಾಲೋದಿಲ್ವಂತೆ! ಹಾಗೇ ಕೂತು ತಿಂದು ತಂದ ತಿಂಡಿಗಳೆಲ್ಲಾ ಖಾಲಿ. ತಿಂಡಿ ಅಷ್ಟೇ ಯಾಕೆ ಬೇರೆ ದಿನಸಿ ಕೂಡ ಖಾಲಿ. ಮನೆಯಿಂದ ಹೊರಹೋದ್ರೆ ಒದೆ ಬೀಳುವ, ಕೊರೋನಾ ಹತ್ತಿಸಿಕೊಂಡು ಬರುವ ಚಿಂತೆ. ಈ ಸಮಯದಲ್ಲಿ ಮನೆ ಬಾಗಿಲಿಗೆ ಯಾರಾದ್ರೂ ನಮಗೆ ಬೇಕಾದ ವಸ್ತುಗಳನ್ನೆಲ್ಲ ತಂದು ಕೊಟ್ಟಿದ್ರೆ? ಅವರು ತಂದುಕೊಟ್ಟ ಐಟಮ್ಗಳನ್ನು ಮನೆ ಹೊರಗೆ ಕೆಲ ಸಮಯ ಇಟ್ಟು, ಸ್ಯಾನಿಟೈಸ್ ಮಾಡಿ ಒಳಗೆ ಎಳೆದುಕೊಳ್ಳಬಹುದಿತ್ತು.
ನಾವು ಮಾತನಾಡುತ್ತಿರೋದು ನಮ್ಮ ಸುತ್ತಮುತ್ತ ಕಾಣುತ್ತಿರೋ ಸಂದರ್ಭಗಳ ಬಗ್ಗೆ, ಆದರೆ ಲಾಕ್ಡೌನ್ ವೇಳೆ ಜಮ್ಮು ಕಾಶ್ಮೀರದ ಪರಿಸ್ಥಿತಿ ಹೇಗಿತ್ತು ಗೊತ್ತಾ? ವಯಸ್ಸಾದವರು ದಿನಸಿ ತರೋಕೆ ಹೊರಬರುವಂತೆ ಇಲ್ಲ, ಸಿಕ್ಕ ಸಿಕ್ಕ ಮಕ್ಕಳನ್ನು, ದೊಡ್ಡವರನ್ನು ‘ನಮಗೆ ಒಂದಿಷ್ಟು ಅಕ್ಕಿ ತಂದುಕೊಡಿ’ ಎಂದು ಗೋಗರೆದಿದ್ದಾರೆ. ಅಕ್ಕಿ ಒಂದೇ ಕೆ.ಜಿ. ಸಿಕ್ಕರೆ ತಂದುಕೊಡಲು ಕಳಿಸಿದವರೇ ಅದನ್ನು ಇಟ್ಟುಕೊಳ್ಳುತ್ತಾರೆ. ಇಂಥ ಸಂದರ್ಭವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ಜನರಿಗೆ ಸಹಾಯ ಮಾಡಲು ಆನ್ಲೈನ್ ದಿನಸಿ ಅಂಗಡಿಯನ್ನು ಆರಂಭಿಸುತ್ತಾನೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಲಿಕ್ ಆದಿಲ್ ತಮ್ಮ ಕೆಲಸ ಬಿಟ್ಟು ಜಮ್ಮುಗೆ ಬಂದು ಆನ್ಲೈನ್ ದಿನಸಿ ಅಂಗಡಿಯನ್ನು ತೆರೆಯುತ್ತಾರೆ. ಇದು ಜಮ್ಮುವಿನಲ್ಲೇ ಮೊದಲ ಆನ್ಲೈನ್ ದಿನಸಿ ಅಂಗಡಿ. ಇದರ ಹೆಸರು ‘ಗ್ರೊಕ್ಸ್ಟರಿ- ದಿ ಸ್ಟೋರ್ ನೆಕ್ಸ್ಟ್ ಡೋರ್’.
ಎರಡು ವರ್ಷದ ಅನುಭವ: ಎಂಬಿಎ ಮುಗಿಸಿದ್ದ ಆದಿಲ್. ಗ್ರೊಫರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಎರಡು ವರ್ಷದ ಅನುಭವದ ನಂತರ ತಮ್ಮದೇ ಆನ್ಲೈನ್ ದಿನಸಿ ಅಂಗಡಿಯನ್ನು ಸ್ಥಾಪಿಸುವ ಕನಸಿತ್ತು. ಆದರೆ ಇಲ್ಲಿಯ ಜನ ಇದನ್ನು ಒಪ್ಪುತ್ತಾರಾ? ದುಡ್ಡು ಎಲ್ಲಿಂದ ತರುವುದು? ನನ್ನ ಜೊತೆಗೆ ಜನ ಬರುತ್ತಾರಾ? ಹೀಗೆಲ್ಲಾ ಆಲೋಚನೆ ಬಂದು, ಐಡಿಯಾವನ್ನು ಸದ್ಯಕ್ಕೆ ಹೋಲ್ಡ್ನಲ್ಲಿ ಇಟ್ಟಿದ್ದರು.
ಲಾಕ್ಡೌನ್ ವರ: ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ತಮ್ಮ ಊರಾದ ಬಂಡೀಪೊರಕ್ಕೆ ಬಂದ ಆದಿಲ್, ಸ್ನೇಹಿತ ಹೈದರ್, ಕಸಿನ್ ಶೋಯಬ್ನ ಜೊತೆ ಕುಳಿತು ಮಾತನಾಡಿದರು. ಕಣ್ಣ ಮುಂದೆಯೇ ವಯಸ್ಸಾದವರು ನಮಗೆ ದಿನಸಿ ತಂದುಕೊಡಿ ಎಂದು ಜನರನ್ನು ಬೇಡುವುದು ಕಂಡಿದ್ದೇನೆ. ಮನಸಿಗೆ ನೋವಾಯಿತು, ಬ್ಯುಸಿನೆಸ್ ಆರಂಭಿಸಲು ಇದೇ ಒಳ್ಳೆ ಸಮಯ ಎಂದು ಅರಿವಾಯ್ತು ಅಂತಾರೆ ಆದಿಲ್.
70 ನಿಮಿಷದೊಳಗೆ ಡೆಲಿವರಿ: ಏಪ್ರಿಲ್ನಲ್ಲಿ ಐಡಿಯಾ ಬಗ್ಗೆ ಗಂಭೀರವಾಗಿ ಆಲೋಚಿಸಿದ ಆದಿಲ್, ಜುಲೈ ವೇಳೆಗೆ ಆಪ್ನನ್ನು ಲಾಂಚ್ ಮಾಡುತ್ತಾರೆ. ಆಪ್ನಲ್ಲಿ ತುಂಬಾ ವೆರೈಟಿಯ ವಸ್ತುಗಳು ಸಿಗುತ್ತವೆ. ಮನುಷ್ಯರ ವಸ್ತುಗಳಷ್ಟೇ ಅಲ್ಲ, ಪ್ರಾಣಿಗಳ ವಸ್ತುಗಳೂ ಇಲ್ಲಿ ಸಿಗುತ್ತವೆ. ಇನ್ನು ತರಕಾರಿ, ಸ್ಟೇಶನರಿ ವಸ್ತುಗಳನ್ನು ಕೂತಲ್ಲೇ ಮನೆಗೆ ತರಿಸಿಕೊಳ್ಳಬಹುದಾಗಿದೆ.
ನೇರ ಬೆಳೆಗಾರರಿಂದಲೂ ತರಕಾರಿ ಖರೀದಿ ಮಾಡಿ ನೀಡಲಾಗುತ್ತದೆ. 70 ನಿಮಿಷದೊಳಗೆ ಗ್ಯಾರೆಂಟಿ ಡೆಲಿವರಿ ನೀಡುತ್ತೇವೆ. ಇದರಿಂದಲೇ ಜನ ನಮ್ಮ ಸರ್ವೀಸ್ ಇಷ್ಟಪಡುತ್ತಾರೆ ಎಂದು ಆದಿಲ್ ಮಾಹಿತಿ ನೀಡಿದ್ದಾರೆ.
ಐಡಿಯಾ ಫ್ಲಾಪ್: ಐಡಿಯಾ ಫ್ಲಾಪ್ ಆಗುವ ಭಯ ಇಲ್ಲದಿದ್ದರೂ ಸಕ್ಸಸ್ ಆಗುವ ನಿರೀಕ್ಷೆಯೂ ಇರಲಿಲ್ಲ. ಆದರೆ ಇಲ್ಲಿಯವರೆಗೆ 65 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಆಪ್ ಡೌನ್ಲೋಡ್ ಮಾಡಿದ್ದಾರೆ. ದಿನಕ್ಕೆ 400 ಆರ್ಡರ್ ಖಂಡಿತವಾಗಿಯೂ ಸಿಗುತ್ತದೆ ಎಂದು ಆದಿಲ್ ಹೇಳಿದ್ದಾರೆ.
ಇನ್ನೂ ಹೆಚ್ಚು ಜನರಿಗೆ ಸಹಾಯ: ಬ್ಯುಸಿನೆಸ್ ಇನ್ನೂ ಹೆಚ್ಚು ಇಂಪ್ರೂವ್ ಮಾಡುವ ಆಸೆ ಇದೆ, ಈಗಾಗಲೇ 35 ಮಂದಿ ಕೆಲಸ ಮಾಡುತ್ತಿದ್ದಾರೆ. ನೂರು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಕನಸಿದೆ. ಇನ್ನೂ ಹೆಚ್ಚು ಹಳ್ಳಿಗಳಿಗೆ ವಸ್ತುಗಳನ್ನು ತಲುಪಿಸುವ ಆಸೆ ಇದೆ ಎನ್ನುತ್ತಾರೆ ಆದಿಲ್. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ, ಎಲ್ಲವೂ ರೆಸ್ಟ್ರಿಕ್ಟ್ ಆಗಿರುವ ಪ್ರದೇಶದಲ್ಲಿ ಆದಿಲ್ ಜನರಿಗೆ ಸಹಾಯ ಮಾಡಲು ದಾರಿ ಹುಡುಕಿದ್ದಾರೆ. ಒಳ್ಳೆಯದು ಮಾಡುವ ಉದ್ದೇಶ ಇದ್ದರೆ ಜನ,ಹಣ ಎಲ್ಲವೂ ಹುಡುಕಿಕೊಂಡು ಬರುತ್ತದೆ. ನಮ್ಮಿಂದ ಬೇಕಾಗಿರುವುದು ಶ್ರಮ ಮಾತ್ರ!