Sunday, August 14, 2022

Latest Posts

ಪಶ್ಚಿಮ ಬಂಗಾಳದಲ್ಲಿ ರೆಡಿಯಾಗುತ್ತಿದೆ ಚುನಾವಣೆ ಅಖಾಡ: ನಂದಿಗ್ರಾಮ ಕ್ಷೇತ್ರದಿಂದ ಕಣಕ್ಕಿಳಿದ ಮಮತಾ ಬ್ಯಾನರ್ಜಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿದ ದೀದಿ, ಈ ಬಾರಿ ಸ್ವಕ್ಷೇತ್ರ ಭವಾನಿಪುರ ಬಿಟ್ಟು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಸುವೇಂದು ಅಧಿಕಾರಿ ವಿರುದ್ಧ ದೀದಿ ನಂದಿಗ್ರಾಮದಲ್ಲಿ ಕಾದಾಡಲಿದ್ದಾರೆ.
ಮಾರ್ಚ್​ 9ರಂದು ನಂದಿಗ್ರಾಮಕ್ಕೆ ಭೇಟಿ ನೀಡುವೆ. ಮಾ.10ರಂದು ಹಲ್ದಿಯಾದಲ್ಲಿ ನಾಮಪತ್ರ ಸಲ್ಲಿಸುವೆ ಎಂದು ಮಮತಾ ಹೇಳಿದ್ದಾರೆ. ತಮಗೆ ಬೆಂಬಲ ನೀಡುತ್ತಿರುವ ಬಿಹಾರದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್, ದೆಹಲಿ ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​, ಜಾರ್ಖಂಡ್​ ಸಿಎಂ ಹೇಮಂತ್ ಸೊರೇನ್ ಮತ್ತು ಶಿವಸೇನೆಗೆ ದೀದಿ ಧನ್ಯವಾದ ಅರ್ಪಿಸಿದ್ದಾರೆ.
50 ಮಹಿಳೆಯರು, 42 ಮುಸ್ಲಿಂ ಅಭ್ಯರ್ಥಿಗಳು ಸೇರಿ 291 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಟಿಎಂಸಿ ಕಣಕ್ಕೆ ಇಳಿಸುತ್ತಿದೆ. ಮೂರು ಸ್ಥಾನಗಳಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿರುವ ಟಿಎಂಸಿ, ಆ ಮೂರು ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ರಾಜ್ಯದಲ್ಲಿ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 27 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರ ಬೀಳಲಿದೆ. ಟಿಎಂಸಿ, ಬಿಜೆಪಿ ಹಾಗೂ ಎಡಪಕ್ಷಗಳ ಮೈತ್ರಿಯೊಂದಿಗೆ ಕಾಂಗ್ರೆಸ್ ಚುನಾವಣಾ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss