Saturday, August 13, 2022

Latest Posts

ಸಹಕಾರ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆಗೆ ಸಂಪೂರ್ಣ ನೆರವು ನೀಡಲು ಬದ್ಧ: ಸಚಿವ ಎಸ್. ಟಿ. ಸೋಮಶೇಖರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಯಾದಗಿರಿ:

ಸಹಕಾರ ಕ್ಷೇತ್ರದಲ್ಲಿ ಜಿಲ್ಲೆಗೆ ಸಂಪೂರ್ಣ ನೆರವು ನೀಡಲು ಬದ್ಧ ಎಂದು ಸಹಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾದ ಎಸ್. ಟಿ ಸೋಮಶೇಖರ್ ಅವರು ಭರವಸೆ ನೀಡಿದರು.
ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಶಹಾಪುರ ವತಿಯಿಂದ ಶಹಾಪುರ ನಗರದಲ್ಲಿ ಆಯೋಜಿಸಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 2014-15ನೇ ಸಾಲಿಗೆ ಡಬ್ಲೂ. ಐ. ಎಫ್ ಯೋಜನೆಯಡಿಯಲ್ಲಿ ರೂ.24.86 ಕೋಟಿಗಳಲ್ಲಿ ಮಂಜೂರಾದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಹಾಪುರ ನಗರವು ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಇದು ಸಗರನಾಡು ಶರಣರ ಬೀಡು ಎಂಬುದು ಅಕ್ಷರಶಃ ಸತ್ಯ ವಾಗಿದ್ದು, ಇದರ ಅಭಿವೃದ್ಧಿಗೆ ಸಹಕಾರ ಕ್ಷೇತ್ರದಿಂದ ಬೇಕಾಗುವ ನೆರವು ನೀಡುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ 157 ಎ.ಪಿಎಂ.ಸಿ ಗಳಿದ್ದು, ಇವುಗಳ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಕೇಂದ್ರ ಸರ್ಕಾರವು ಎ.ಪಿಎಂ.ಸಿ ಕಾಯ್ದೆ ಜಾರಿಗೆ ತಂದು ಹಲವಾರು ಕಾನೂನುಗಳಲ್ಲಿ ಬದಲಾವಣೆ ತಂದಿದ್ದು, ರೈತರು ಇದರ ಸದಪಯೋಗವನ್ನು ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಸೆ.5ರಂದು ಗಣೇಶ ಹಬ್ಬ ಆಚರಿಸುವ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಆಯಾ ಜಿಲ್ಲೆಯ ಡಿಸಿ ಮತ್ತು ಎಸ್ಪಿ ಗಳಿಗೆ ಸೂಚನೆ ನೀಡಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಶಾಸಕ ಶರಣಬಸಪ್ಪ ಗೌಡ ದರ್ಶನಾಪೂರ ಮಾತನಾಡಿ, ಶಹಾಪುರ ಎ.ಪಿಎಂ.ಸಿ ಅಭಿವೃದ್ಧಿಗೆ ವರ್ತಕರ ಸಹಕಾರ ಕೂಡ ಮುಖ್ಯವಾಗಿದೆ ಎಂದರು.
ಶಹಾಪುರ ಜನದಟ್ಟನೆ ಪ್ರದೇಶವಾಗಿದ್ದು, ರಿಂಗ್ ರೋಡ್ ನಿರ್ಮಿಸುವುದು ಬಹಳ ಆವಶ್ಯಕ ವಾಗಿದೆ ಎಂದರು.
ಜಿಲ್ಲೆಯ ಜನರಿಗೆ ಜಲಧಾರೆ ಯೋಜನೆ ಮುಖಾಂತರ ಶಾಶ್ವತ ಕುಡಿಯವ ನೀರು ಪೂರೈಕೆ ಮಾಡುವ ಮೂಲಕ ಈ ಭಾಗದ ಜನರ ಬೇಡಿಕೆ ಈಡೇರಿಸಬೇಕು ಎಂದು ಅವರು ಸಚಿವ ಹಾಗೂ ಎಂ. ಪಿ ಅವರಿಗೆ ಮನವಿ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ 350ಕ್ಕೂ ಹೆಚ್ಚು ಪ್ಲಾಟುಗಳ ಮಂಜೂರು ಮಾಡುವಂತೆ ಬೇಡಿಕೆ ಸಲ್ಲಿಸಿದರು.
ಸಂಸದ ರಾಜಾ ಅಮರೇಶ್ವರ ನಾಯಕ್ ಮಾತನಾಡಿ, ರೈತರ ಆದಾಯ ವೃದ್ಧಿಗೊಳಿಸಿದ್ದಾರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಣಾ ಮಾಡುವಂತೆ ಕಿವಿಮಾತು ಹೇಳಿದರು.
ಮೋದಿ ನೇತೃತ್ವ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಕುರಿತು ರೈತರಿಗೆ ಜನರಿಗೆ ತಿಳಿಸಿ ಎಂದು ಅವರು ತಿಳಿಸಿದರು.
ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿಗೌಡ ಮಾತನಾಡಿ, ನೂತನ ತಾಲೂಕು ವಾಡಗೆರಾ ದಲ್ಲಿಯೂ ಎ.ಪಿಎಂ.ಸಿ ಯನ್ನು ಸಹ ಅಭಿವೃದ್ಧಿಗೊಳಿಸಿಲು ನೆರವು ನೀಡುವಂತೆ ಸಚಿವರನ್ನು ಕೋರಿದ್ದರು.
ಈ ಸಂದರ್ಭದಲ್ಲಿ ಶಹಾಪೂರ ಎ.ಪಿಎಂ.ಸಿ ಅಧ್ಯಕ್ಷ ವೀರಣ್ಣ ಸಾಹು, ಶಹಾಪೂರ ನಗರಸಭೆ ಅಧ್ಯಕ್ಷೆ ಶಹಾನಜ್ ಬೇಗಂ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಕಲಬುರಗಿ – ಯಾದಗಿರಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ರಾದ ಸುರೇಶ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss