ಹೊಸ ದಿಗಂತ ವರದಿ, ರಾಮನಗರ :
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ ರಾಮನಗರ, ಇವರ ಸಂಯುಕ್ತ ಆಶ್ರಯದಲ್ಲಿ ಮಾಗಡಿ ತಾಲ್ಲೂಕು ಹುಲ್ಲಿಕಟ್ಟೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ, ಕೋವಿಡ್ ನಿಯಂತ್ರಣ, ಲಸಿಕೆ ಮಹತ್ವ ಕುರಿತ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೈದ್ಯಾಧಿಕಾರಿ ಡಾ. ಯದುಕುಮಾರ್ ಅವರು ಕರ ಪತ್ರ ಬಿಡುಗಡೆಮಾಡಿ ನಂತರ ಮಾತನಾಡಿ, ವಸತಿ ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್ – 19 ರ ನಿಯಾಮವಳಿ ಪಾಲಿಸುವಂತೆ ಸಲಹೆ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಕೋವಿಡ್ – 19 ರ 3 ಅಲೆ ನಿಯಂತ್ರಿಸ ಬೇಕಾದರೆ ಅರ್ಹ ಫಲಾನುಭವಿಗಳು ಕೋವಿಡ್ ಲಸಿಕ ಪಡೆಯಬೇಕು. ಮಕ್ಕಳು ತಮ್ಮ ಕುಟುಂಬದಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಸಲಹೆ ನೀಡಿದರು.
ಜಿಲ್ಲಾ ಎಸ್.ಬಿ.ಸಿ ಸಂಯೋಜಕ ಸುರೇಶ್ಬಾಬು, ಮಾತನಾಡಿ ವಸತಿ ಶಾಲೆಗಳಲ್ಲಿ ಒಂದೇ ಸ್ಥಳದಲ್ಲಿ ಶಿಕ್ಷಣ ಮತ್ತು ವಾಸ್ಥವ್ಯ ವ್ಯವಸ್ಥೆ ಇರುವುದರಿಂದ ಆತಂಕ ಪಡುವ ಅವಶ್ಯಕವಿಲ್ಲ. ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈ ಗಳ ಸ್ವಚ್ಛತೆ, ಜೊತೆಗೆ ವೈಯಕ್ತಿಕ, ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜ್ವರ, ನೆಗಡಿ, ಗಂಟಲು ನೋವು, ಇತ್ಯಾದಿ ಲಕ್ಷಣಗಳು ಕಂಡು ಬಂದ ತಕ್ಷಣ ವಸತಿ ಶಾಲೆಯಲ್ಲಿರುವ ಶುಶ್ರೂಶಕರಿಗೆ ಮಾಹಿತಿ ತಿಳಿಸಿ ಸೂಕ್ತ ಚಿಕಿತ್ಸೆ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬೈಲಪ್ಪ, ವಸತಿ ಶಾಲೆಯ ಬೋಧಕರು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು