ಹೊಸದಿಗಂತ ವರದಿ,ಗದಗ :
ಡ್ಯಾಮ್ ಸೇಫ್ಟಿ ಟೀಮ್‌ಗಳು ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು ಮತ್ತು ಡ್ಯಾಂ ಸೇಫ್ಟಿ ಕಮೀಟಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿ ಮೇಲ್ವಿಚಾರಣೆಗಾಗಿ ವಿಶೇಷ ಸಮಿತಿ ಮಾಡಬೇಕಾಗಿರುವದು ಅಗತ್ಯವಾಗಿದೆ. ಅವರ ಶಿಫಾರಸ್ಸುಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ. ಪಾಟೀಲ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುಂಗಭದ್ರ ಡ್ಯಾಮ್‌ನಲ್ಲಿ 19ನೇ ಗೇಟ್ ದುರಸ್ತಿಗೆ ಬಂದ ಕಾರಣ 52 ಟಿಎಂಸಿ ನೀರು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಈ ಅವಘಡಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಾಕಷ್ಟು ನೊಂದಿದ್ದಾರೆ . ನೀರಿನ ಮಹತ್ವ ನೀರಿನ ಕೊರತೆಯಾದಾಗ ತಿಳಿಯುತ್ತದೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಡ್ಯಾಮ್ ಸೇಫ್ಟಿ ಟೀಮ್ ಅಧಿಕಾರಿಗಳೊಂದಿಗೆ ಮತ್ತು ತಜ್ಞರೊಂದಿಗೆ ಚರ್ಚೆ ಮಾಡಿ ಹಾನಿಯ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದಾರೆ. ದುರಸ್ತಿ ಕಾರ್ಯ ಬಹುಬೇಗ ಆಗಲಿದೆ. ಮಳೆಯು ಆಗಸ್ಟ್ ತಿಂಗಳವರೆಗೆ ಇರುವುದರಿಂದ ನೀರು ಸಂಗ್ರಹಣೆಯಲ್ಲಿ ಆತಂಕ ಇಲ್ಲ ಎಂದು ಹೇಳಿದರು.
ಅದೇ ರೀತಿ ಸಿಂಗಟಾಲೂರು ಏತ ನೀರಾವರಿ ಹಮ್ಮಿಗೆ ಬ್ಯಾರಿಜ್ ನಲ್ಲಿ ಗೇಟ್‌ಗಳು ರಬ್ಬರ ಪ್ಯಾಡ್‌ಗಳನ್ನು ದುರುಸ್ತಿ ಮಾಡಲು ಐದು ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಟೆಂಡರ್ ಕರೆಯಲಾಗಿದ್ದು ಮಳೆ ಕಡಿಮೆ ಆದ ನಂತರ ಕೆಲಸ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಹೇಳಿದರು.