ಹೊಸದಿಗಂತ ವರದಿ, ಶಿವಮೊಗ್ಗ:
ಮಲೆನಾಡಿನಲ್ಲಿ ಜೇನು ಕುಟುಂಬಗಳು ರೋಗಕ್ಕೆ ತುತ್ತಾಗುತ್ತಿವೆ. ಸಂತತಿ ಕ್ಷೀಣಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆ ತನಿಖೆ ಮಾಡಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರು ಆಗ್ರಹಿಸಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜೇನು ಕುಟುಂಬಗಳಿಗೆ ಬಂದಿರುವ ರೋಗದ ಬಗ್ಗೆ ಪರಿಶೀಲನೆ ಮಾಡಬೇಕು. ಇದರ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಿಲ್ಲ. ಹೆಜ್ಜೇನು, ತುಡವಿ ಜೇನು ಸೇರಿದಂತೆ ಪಾರಂಪರಿಕ ಜೇನು ತಳಿಗಳು ಯಾಕೆ ನಶಿಸುತ್ತಿವೆ ಎಂಬ ಬಗ್ಗೆ ಅರಣ್ಯ ಇಲಾಖೆ ತನಿಖೆ ಮಾಡಬೇಕು. ಬಂದಿರುವ ರೋಗಕ್ಕೆ ಸೂಕ್ತ ಔಷಧೋಪಚಾರದ ಬಗ್ಗೆ ಕೃಷಿ ಮತ್ತು ತೋಟಗಾರಿಕಾ ವಿವಿ ವಿಜ್ನಾನಿಗಳು ಸಂಶೋಧನೆ ನಡೆಸಬೇಕು. ತೋಟಗಾರಿಕಾ ಇಲಾಖೆ ಸಮಗ್ರ ನೀತಿ ರೂಪಿಸಬೇಕು ಎಂದರು.
ಜೇನು ಸಾಕಾಣಿಕೆದಾರ ನಾಗೇಂದ್ರ ಸಾಗರ್ ಮಾತನಾಡಿ, ಸರ್ಕಾರದ ಉತ್ತೇಜನದ ನಡುವೆಯೂ ಜೇನು ಕೃಷಿ ಸೋಲಲು ಆರಂಭಿಸಿದೆ. ಪಾರಂಪರಿಕ ಕಾಡು ನಾಶ, ಕೀಟನಾಶಕಗಳ ವಿಪರೀತ ಬಳಕೆ, 3 ವರ್ಷದಿಂದ ಸತತ ಥಾಯ್ ಸ್ಯಾಕ್ ಬ್ರೂಡ್ ಎಂಬ ವೈರಸ್ ಕಾಯಿಲೆ ಬಾಧಿಸುತ್ತಿರುವುದು ಇದಕ್ಕೆ ಕಾರಣ. ಜಿಲ್ಲೆಯಲ್ಲಿ 1500 ಜನರು ಜೇನು ಕೃಷಿಕರಿದ್ದಾರೆ. ಆದರೆ ರೋಗದಿಂದ ಆದಾಯ ಖೋತಾ ಆಗಿ ಉತ್ಸಾಹ ಕಳೆದುಕೊಳ್ಳುತಿದ್ದಾರೆ ಎಂದರು.
ಅರಣ್ಯ ಇಲಾಖೆಯ ಅರವಿಂದ ಸುದ್ದಿಗೋಷ್ಟಿಯಲ್ಲಿದ್ದರು.