ಹೊಸ ದಿಗಂತ ವರದಿ, ಮಂಡ್ಯ:
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಕೃಷ್ಣರಾಜಸಾಗರ ಜಲಾಶಯ ಸೇರಿದಂತೆ ಈ ಭಾಗದ ಜಲಾಶಗಳು ಭರ್ತಿಯಾಗದೆ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆಡೆಮಾಡಿಕೊಟ್ಟಿದೆ.
ಕಳೆದ ಕೆಲ ದಿನಗಳ ಹಿಂದೆ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ತೀವ್ರತೆ ಪಡೆದುಕೊಂಡಿದ್ದ ಕಾರಣ ಕೆ.ಆರ್.ಎಸ್. ಸೇರಿದಂತೆ ಎಲ್ಲ ಜಲಾಶಯಗಳು ಮೈದುಂಬುತ್ತಿದ್ದವು. ಆದರೀಗ ಮಳೆ ಕೊರತೆ ಎದುರಾಗಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಮಧ್ಯೆ ತಮಿಳುನಾಡಿಗೆ ನಿತ್ಯ 10 ರಿಂದ 13 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಜಲಾಯದ ನೀರಿನ ಮಟ್ಟವೂ ಕುಸಿಯುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸೆ. 27ರಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ಇರುವ ಕಾರಣ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿರುವುದನ್ನು ಮನಗಂಡು ಕೃಷ್ಣರಾಜಸಾಗರ ಜಲಾಶಯದಿಂದ ನಿತ್ಯ 10 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹರಿಸುವ ಮೂಲಕ ಮಂಡಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆನ್ನಲಾಗಿದೆ.
ಮೌನಕ್ಕೆ ಶರಣಾದ ಹೋರಾಟಗಾರರು :
ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸಂದರ್ಭದಲ್ಲೆಲ್ಲಾ ರೈತರು ರಸ್ತೆಗಿಳಿದು ಹೋರಾಟ ನಡೆಸಿ ಚಳವಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದ್ದ ಕಾಲವೊಂದಿತ್ತು. ನಾಯಕತ್ವವೇ ಇಲ್ಲದ ಕಾವೇರಿ ನೆಲದಲ್ಲಿ ಹೋರಾಟ ಮರೆಯಾಗಿದೆ. ಕಾವೇರಿ ಹೋರಾಟಗಾರರು ಮೌನಕ್ಕೆ ಶರಣಾಗಿದ್ದಾರೆ. ನೀರು ಬಿಡುವ ವಿಚಾರದಲ್ಲಿ ಪ್ರಬಲ ಒತ್ತಡ ಬೀಳದಿರುವುದರಿಂದ ಕಾವೇರಿ ವಿಷಯವನ್ನು ರಾಜ್ಯಸರ್ಕಾರವೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
114 ಅಡಿಗೆ ಕುಸಿತ :
ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಹಾಲಿ ಅಣೆಕಟ್ಟೆಯ ನೀರಿನ ಮಟ್ಟ 114.20 ಅಡಿಗೆ ಇಳಿಮುಖವಾಗಿದೆ. ಅಣೆಕಟ್ಟೆಗೆ 4785 ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಜಲಾಶಯದಿಂದ 10801 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನದಿಗೆ 9584 ಕ್ಯುಸೆಕ್ ನೀರನ್ನು ಬಿಡಲಾಗಿದ್ದು, ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಸುವ ಮೂಲಕ ತಮಿಳುನಾಡಿಗೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣವನ್ನು ಆದಷ್ಟು ಪೂರೈಸುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಆತುರ ತೋರುತ್ತಿದ್ದಾರೆ.