ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಭಾರತಕ್ಕೆ ರಾಜತಾಂತ್ರಿಕ ಜಯ ಸಿಕ್ಕಿದೆ.

ಬಿಡುಗಡೆಗೊಂಡ ನಾವಿಕರು ಇರಾನ್‌ನಿಂದ ನಿರ್ಗಮಿಸಿದ್ದಾರೆ ಎಂದು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಬಂದರ್ ಅಬ್ಬಾಸ್‌ನಲ್ಲಿರುವ ರಾಯಭಾರ ಕಚೇರಿ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಮನ್ವಯಕ್ಕಾಗಿ ಇರಾನ್ ಅಧಿಕಾರಿಗಳಿಗೆ ಧನ್ಯವಾದ ತಿಳಿಸಲಾಗಿದೆ.

ಇಸ್ರೇಲ್-ಸಂಬಂಧಿತ ಸರಕು ಹಡಗನ್ನು ಏ.13 ರಂದು ಇರಾನ್ ವಶಪಡಿಸಿಕೊಂಡಿತು. ಅದರಲ್ಲಿ 17 ಭಾರತೀಯರು ಇದ್ದರು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆಯು ಹಾರ್ಮುಜ್ ಜಲಸಂಧಿಯ ಬಳಿ ಕಂಟೈನರ್ ಹಡಗನ್ನು ವಶಪಡಿಸಿಕೊಂಡಿತ್ತು.ಇಸ್ರೇಲ್ ಸಂಪರ್ಕಿತ ಸರಕು ಹಡಗು ‘ಎಂಎಸ್‌ಸಿ ಏರೀಸ್’ನ 17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರಾದ ಕೇರಳದ ತ್ರಿಶೂರ್‌ನ ಆನ್ ಟೆಸ್ಸಾ ಜೋಸೆಫ್ ಏ.18 ರಂದು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದರು.

17 ಭಾರತೀಯ ಸಿಬ್ಬಂದಿಯಲ್ಲಿ ಒಬ್ಬರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇತರರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!