ಸಲೂನ್ ವ್ಯವಹಾರಕ್ಕೆ ಕಾಲಿಡುತ್ತಿದೆ ರಿಲಯನ್ಸ್:‌ ನ್ಯಾಚುರಲ್ಸ್‌ ನಲ್ಲಿ 49 ಶೇ. ಪಾಲು ಖರೀದಿಗೆ ಯೋಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಲಯನ್ಸ್‌ ಇಂಡಸ್ಟ್ರೀಸ್‌ ನ ಘಟಕವಾಗಿರುವ ರಿಲಯನ್ಸ್‌ ರೀಟೇಲ್ಸ್‌ ಸಲೂನ್‌ ವ್ಯವಹಾರವನ್ನು ಪ್ರವೇಶಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಲಭ್ಯವಿರುವ ಮಾಹಿತಿಗಳ ಪ್ರಕಾರ ನ್ಯಾಚುರಲ್ಸ್ ಸಲೂನ್ ಮತ್ತು ಸ್ಪಾದಲ್ಲಿ 49% ಪಾಲನ್ನು ಖರೀದಿಸಲು ರಿಲಯನ್ಸ್‌ ರೀಟೇಲ್‌ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಈ ಕುರಿತು ಸಲೂನ್ ಸರಣಿಯ ಮುಖ್ಯ ಕಾರ್ಯನಿರ್ವಾಹಕರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾತುಕತೆಗಳು ನಡೆಯುತ್ತಿದ್ದು ಇನ್ನೂ ಡೀಲ್‌ ಪಕ್ಕಾ ಆಗಿಲ್ಲ ಎನ್ನಲಾಗಿದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ರವರ್ತಕರಾದ ಗ್ರೂಮ್ ಇಂಡಿಯಾ ಸಲೂನ್ಸ್ ಮತ್ತು ಸ್ಪಾವು 700 ನ್ಯಾಚುರಲ್ಸ್‌ ಸ್ಪಾ ಮತ್ತು ಸಲೂನ್‌ ಗಳನ್ನು ನೋಡಿಕೊಳ್ಳುತ್ತಿದೆ. ರಿಲಯನ್ಸ್‌ ರೀಟೇಲ್‌ ಪ್ರವೇಶವು ಸ್ಪಾ ಸರಣಿಗೆ ತನ್ನ ನೆಟ್‌ವರ್ಕ್ ಅನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಎಕಾನಮಿಕ್‌ ಟೈಮ್ಸ್‌ ವರದಿ ಮಾಡಿದೆ.

2000 ರ ದಶಕದ ಆರಂಭದಲ್ಲಿ ಸ್ಥಾಪಿಸಲಾದ ಚೆನ್ನೈ ಮೂಲದ ನ್ಯಾಚುರಲ್ಸ್, 2025 ರ ವೇಳೆಗೆ 3,000 ಸಲೂನ್‌ಗಳನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಅದರ ವೆಬ್‌ಸೈಟ್ ತಿಳಿಸಿದೆ. ಹಾಗಾಗಿ ರಿಲಯನ್ಸ್‌ ಪ್ರವೇಶವು ಈ ಗುರಿಗೆ ಇನ್ನಷ್ಟು ವೇಗ ತಂದುಕೊಡಲಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಮಾತುಕತೆಗಳು ನಡೆಯುತ್ತಿದ್ದು ಒಪ್ಪಂದ ನಿಖರ ಮೊತ್ತ ಇತ್ಯಾದಿ ವಿವರಗಳು ಮಾತುಕತೆ ಪೂರ್ಣಗೊಂಡ ನಂತರವಷ್ಟೇ ತಿಳಿಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!