Sunday, August 14, 2022

Latest Posts

ರೆಮ್ಡಿಸಿವಿರ್ ಕೊರತೆ ನೀಗಿಸಲು ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ಲಿಂಬಾವಳಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ವರದಿ,ಕೋಲಾರ:

ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ, ತಕ್ಕಮಟ್ಟಿಗೆ ಪೂರೈಕೆಯಾಗುತ್ತಿದೆ, ರೆಮ್ ಡಿಸಿವಿರ್ ಚುಚ್ಚುಮದ್ದಿನ ಕೊರತೆ ಇದ್ದು ಅದನ್ನು ಸರಿಪಡಿಸಲಾಗುವುದು, ಸಮಸ್ಯೆ ಎದುರಾಗದಂತೆ ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದ್ದೇನೆ ಎಂದು ರಾಜ್ಯ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದಲಿಂಬಾವಳಿ ತಿಳಿಸಿದರು.
ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ನಗರಕ್ಕೆ ಭೇಟಿ ನೀಡಿದ್ದ ಅವರು, ನಗರದ ಜಿಪಂ ಸಭಾಂಗಣದಲ್ಲಿ ಕೋವಿಡ್ ಕುರಿತ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಕೆಲವಾರು ಸಂಗತಿಗಳು ಬಹಳ ಸಮಾಧಾನಕರವಾಗಿ ಇದೆ, ಕೋವಿಡ್ ಪರೀಕ್ಷೆಯ ಗುರಿ ಸಾಧಿಸಿ ಫಲಿತಾಂಶವನ್ನು ಸರಿಯಾದ ಸಮಯಕ್ಕೆ ನೀಡಲಾಗುತ್ತಿದೆ, ಪಾಸಿಟಿವ್ ಪ್ರಕರಣಗಳಲ್ಲಿ ಶೇ ೮೫ರಷ್ಟು ಜನ ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂಂದರು.
ಹೋಂ ಐಸೋಲೇಷನ್‌ನಲ್ಲಿ ಇರುವ ರೋಗಿಗಳ ಮನೆಗೆ ವೈದ್ಯರು ಮತ್ತು ನರ್ಸ್‌ಗಳು ಭೇಟಿ ನೀಡುತ್ತಿದ್ದಾರೆ. ಪಾಸಿಟೀವ್ ಬಂದ ನಂತರ 2ನೇ,6,9 ಮತ್ತು 12ನೇ ದಿನಗಳಲ್ಲಿ ಭೇಟಿ ನೀಡಿ ಸಲಹೆ ನೀಡುತ್ತಿದ್ದಾರೆ ಎಂದರು.

ಕೋಲಾರದಲ್ಲಿ ಪ್ರಕರಣ ಹೆಚ್ಚು
ಕೋಲಾರ, ಮಾಲೂರಿನಲ್ಲಿ ಜಾಸ್ತಿ ಪ್ರಕರಣಗಳು ಬರುತ್ತಿದೆ. ಇಲ್ಲಿ ಹೋಂ ಐಸೋಲೆರಷನ್ ಹೆಚ್ಚಿನ ಜನ ಇದ್ದಾರೆ, ಇಲ್ಲಿ ಪರೀಕ್ಷೆ ಜಾಸ್ತಿ ನಡೆಸುತ್ತಿರುವುದು ಮತ್ತು ಬೆಂಗಳೂರಿಗೆ ಹತ್ತಿರವಾಗಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಎಂದರು.
ಹೊರ ಜಿಲ್ಲೆಗಳು, ರಾಜ್ಯಗಳಿಂದ ಬರುವವರನ್ನು ತಡೆಯಲು ಪೊಲೀಸ್ ಇಲಾಖೆಯಿಂದ ಚೆಕ್‌ಪೋಸ್ಟ್ ಹಾಕಿದ್ದಾರೆ.ಕಠಿಣವಾಗಿ ಜನತಾ ಕರ್ಫ್ಯೂ ಅಳವಡಿಸಲು ಸೂಚನೆ ನೀಡಿದ್ದೇನೆ ಎಂದರು.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಹಾಸಿಗೆ ಕೊರತೆ ಇಲ್ಲ. ಆದರೆ ಮುಂದೆ ಕೊರತೆ ಆಗದೆ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಗುಣಮುಖರಾದವರು ಇತರರಿಗೆ ನೆರವಾಗಿ

ಗುಣಮುಖರಾಗುವ ರೋಗಿಗಳು ಬೇರೆಯವರಿಗೆ ಬೆಡ್ ನೀಡುವ ಸ್ವಭಾವಕ್ಕೆ ಬರಬೇಕು ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ಬರುವವರು ವೆಂಟಿಲೇಟರ ಪಡೆಯುತ್ತಾರೆ ಆದರೆ ಗುಣಮುಖರಾದರೂ ಸಾಮಾನ್ಯ ವಾರ್ಡ್‌ಗೆ  ಬದಲಾಗದೇ ಅಲ್ಲೇ ಮುಂದುವರೆಯಲು ಒತ್ತಾಯಿಸುವುದು ಗಮನಕ್ಕೆ ಬಂದಿದೆ ಎಂದರು.
ವೆಂಟಿಲೇಟರ್ ಹಾಸಿಗೆಯಲ್ಲೇ ಇರಬೇಕೆಂದು ಒತ್ತಾಯಿಸುವುದು ಸರಿಯಲ್ಲ, ಇತರ ಸಂಕಷ್ಟದಲ್ಲಿರುವ ರೋಗಿಗಳ ಜೀವವೂ ಅಮೂಲ್ಯವೇ ಎಂದ ಅವರು ಇದನ್ನು ತಡೆಯಲು ಪೊಲೀಸರನ್ನು ಬಳಸಬೇಕಾಗಿ ಬಂದಿದೆ ಎಂದರು.
ಗುಣಮುಖರಾದ ಮೇಲೆ ವೈದ್ಯರ ಸಲಹೆ ಮೇರೆಗೆ ಜನರಲ್ ಬೆಡ್‌ಗೆ ಶಿಫ್ಟ್, ಇಲ್ಲವೇ ಬಿಡುಗಡೆಗೆ ಸೂಚಿಸಿದರೆ ಡಿಸ್‌ಜಾರ್ಚ್ ಆಗಿ, ಇಲ್ಲದಿದ್ದರೆ ಬೇರೆ ರೋಗಿಗಳಿಗೆ ತೊಂದರೆ ಆಗುತ್ತದೆ ಎಂದು ತಾಕೀತು ಮಾಡಿದರು.

ಆಕ್ಸಿಜನ್ ನೀಡಿಕೆಗೆ ಹಿಂದೇಟು ಇಲ್ಲ

ರಾಜ್ಯ ಸರ್ಕಾರದಿಂದ ಬರಬೇಕಿರುವ ಆಕ್ಸಿಜನ್ ತಕ್ಕ ಮಟ್ಟಿಗೆ ಸರಿಹೋಗಿದೆ. ಅಗತ್ಯ ಬಿದ್ದರೆ ಪೂರೈಸುವ ದೃಷ್ಠಿಯಿಂದ ರಾಜ್ಯ ಸರ್ಕಾರ ಹಿಂದೇಟು ಹಾಕಲ್ಲ
ರೆಮಿಸಿಸಿವಿಯರ್ ಕೊರತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ವೈದ್ಯರ ಸಲಹೆ ಪಾಲಿಸಲು ಕರೆ

ರೋಗಿಗಳು ವೈದ್ಯರ ಸೂಚನೆಯಂತೆ ನಡೆದುಕೊಳ್ಳಬೇಕು, ರೌಂಡ್ಸ್‌ನಲ್ಲಿರುವ ವೈದ್ಯರು ಎಷ್ಟು ಆಕ್ಸೀಜನ್ ನೀಡಬೇಕೆಂದು ನಿರ್ದೇಶನ ನೀಡಿದ್ದಾರೋ ಅಷ್ಟೇ ತೆಗೆದುಕೊಳ್ಲಬೇಕು, ಹೆಚ್ಚು ತೆಗೆದುಕೊಳ್ಳುವುದು, ರೆಮಿಸಿವಿಯರ್ ಕೊಡಿ ಎಂದು ಹೇಳುವುದು ಸೂಕ್ತವಲ್ಲ, ಇದು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ ಎಂದರು.

ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್ ಹಂಚಿಕೆಗೆ ಕ್ರಮ

ಮೆಡಿಕಲ್ ಕಾಲೇಜಿನ ಬೆಡ್ ನೀಡಿದ್ದಾರೆ. ಮ್ಯಾನೇಜ್‌ಮೆಂಟ್ ದೃಷ್ಠಿಯಲ್ಲಿ ಸೂಕ್ತವಾಗಿ ನಿರ್ವಹಣೆ  ಆಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಕ್ಕೆ  ಹಂಚಿಕೆಯಾದ ಹಾಸಿಗೆಗಳ ಭರ್ತಿ ಕಾರ್ಯ ಜಿಲ್ಲಾಡಳಿತದಿಂದಲೇ ನಡೆಸಲು ನಿರ್ದೇಶನ ನೀಡಲಾಗಿದೆ ಎಂದರು.
ನಮಗೆ ಲಭ್ಯವಿರುವ ಹಾಸಿಗೆ, ಯಾವ ರೋಗಿಗಳಿದ್ದಾರೆ ಎಂಬುದು ನಮ್ಮ ಕೋಟಾದಲ್ಲಿರುತ್ತಾರೆ. ಅದರ ಸಂಪೂರ್ಣ ವಿವರಗಳು ಪ್ರತಿದಿನ ಪ್ರಕಟ ಆಗಬೇಕು ಎಂದು ಸೂಚಿಸಿದ್ದೇನೆ.
ಒಟ್ಟಾರೆ ಡಿಸಿ ಮತ್ತು ತಂಡಕ್ಕೆ  ಅಭಿನಂದಿಸುತ್ತೇನೆ. ವ್ಯವಸ್ಥಿತವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದಾರೆ. ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಬೇಕಾಗಿದೆ. ಲೋಪದೋಷಗಳಿದ್ದರೆ ಸರಿಪಡಿಸುವ ದೃಷ್ಠಿಯಿಂದ ತಕ್ಷಣಕ್ಕೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಕೆಜಿಎಫ್ ಆಸ್ಪತ್ರೆ 100 ಹಾಸಿಗೆಗಳಿಗೆ

ಕೆಜಿಎಫ್‌ಗೆ ಆಕ್ಸಿಜನ್ ಘಟಕ ಬಂದಿದೆ. ಅಲ್ಲಿನ 50 ಹಾಸಿಗೆಯನ್ನು 100ಕ್ಕೆ ಏರಿಸಲಾಗುವುದು. ಅದರಲ್ಲಿ ಐಸಿಯು ಬೆಡ್‌ಗಳಾಗಿ ಪರಿವರ್ತನೆ ಮಾಡುವ ಬಗ್ಗೆ ಯೋಚನೆ ಮಾಡಲಾಗುವುದು ಎಂದರು.
18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ. ಬೇರೆ ಜಿಲ್ಲೆಯಿಂದ ಇಲ್ಲಿಗೆ ಬರುತ್ತಿದ್ದಾರೆ. ಹಂಚಿಕೆ ಆನ್‌ಲೈನ್‌ನಲ್ಲಿದೆ. ಬೆಂಗಳೂರಿನ ಸ್ಥಿತಿ ಸುಧಾರಿಸುವವರೆಗೆ 18 ರಿಂದ 44 ವರ್ಷದವರೆಗೆ ನೀಡುವುನ್ನು ನಿಲ್ಲಿಸಿ ಅದರ ಬದಲಿಗೆ 45ರಿಂದ ಮೇಲ್ಪಟ್ಟವರಿಗೆ 2ನೇ ಡೋಸ್ ನೀಡಲು ಆದ್ಯತೆ ಮೇಲೆ ನೀಡಬೇಕು ಎಂದರು.

ಸಿದ್ದು ಆರೋಪಕ್ಕೆ ಲಿಂಬಾವಳಿ ತಿರುಗೇಟು
ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಲಿಂಬಾವಳಿ, ಪ್ರತಿಪಕ್ಷವಾಗಿ ಅವರಿಗೆ ಆರೋಪ ಮಾಡುವುದೇ ಕೆಲಸ ಮಾಡಲಿ ಬಿಡಿ ಎಂದರು.
ಸಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿ ನೀಡುತ್ತಿಲ್ಲ, ಅದು ಪ್ರತಿ ಬಾರಿಯೂ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತೇವೆ. ಕರ್ನಾಟಕ ವಾರ್‌ರೂಂ, ಭೌತಿಕ ಪರಿಶೀಲನೆ, ಮೆಡಿಸಿನ್ ಬಗ್ಗೆ ನನಗೆ ಸಿಎಂ ಜವಾಬ್ದಾರಿ ನೀಡಿದ್ದಾರೆ. ನನ್ನ ಬಳಿ ಪ್ರತಿ ದಿನ ಅಪ್‌ಡೇಟ್ ಇರುತ್ತದೆ ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರು ಲಾಠಿ ಬೀಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸರಿಯಾಗಿ ಲಾಕ್‌ಡೌನ್ ಆಗಿಲ್ಲ ಎಂದರೆ ನೀವೇ ಎಲ್ಲಾ ಓಪನ್ ಆಗಿದೆ ಎಂದು ಟೀಕಿಸುತ್ತೀರಿ, ಲಾಕ್ ಡೌನ್ ಮಾಡಲು ಕಠಿಣ ಕ್ರಮ ಕೈಗೊಂಡರೆ ಅದಕ್ಕೂ ಹೀಗೆ ಪ್ರಶ್ನಿಸುತ್ತೀರಿ ಎಂದು ನುಡಿದರು. ಈ ಸಂದರ್ಭ ಸಂಸದ ಎಸ್.ಮುನಿಸ್ವಾಮಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಸ್ಪಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ಎಸ್ಪಿ ಇಲಾಕ್ಕಿಯಾ, ಜಿಪಂ ಸಿಇಒ ನಾಗರಾಜ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss