ಖ್ಯಾತ ನಾಟಿ ವೈದ್ಯ ಹನುಮಂತ ಬೊಮ್ಮುಗೌಡರಿಗೆ ಪ್ರತಿಷ್ಠಿತ ಎಚ್. ಎಲ್. ನಾಗೇಗೌಡ ಪ್ರಶಸ್ತಿ ಪ್ರದಾನ

ಹೊಸದಿಗಂತ ವರದಿ, ಅಂಕೋಲಾ
ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಎಚ್. ಎಲ್. ನಾಗೇಗೌಡ ದತ್ತಿನಿಧಿ ಪ್ರಶಸ್ತಿಯನ್ನು ಖ್ಯಾತ ನಾಟಿ ವೈದ್ಯ ಬೆಳಂಬಾರದ ಹನುಮಂತ ಬೊಮ್ಮುಗೌಡ ಅವರಿಗೆ ನೀಡಿ ಗೌರವಿಸಲಾಗಿದೆ.
ಕಲೆ,ಸಂಸ್ಕೃತಿ, ಮತ್ತು ಪರಂಪರೆಗೆ ಹೆಸರಾದ ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಸಮುದಾಯಕ್ಕೆ ಸೇರಿದ ಹನುಮಂತ ಬೊಮ್ಮುಗೌಡ ಅವರು ತಮ್ಮ ಮನೆತನದ ವಂಶಪಾರಂಪರಿಕ ನಾಟಿ ವೈದ್ಯ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದು ಪಾರ್ಶ್ವವಾಯು, ಅರ್ಧಾಂಗ ವಾಯು, ದಿವಾತ ಸೇರಿದಂತೆ ಹಲವಾರು ರೀತಿಯ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧಗಳನ್ನು ನೀಡುವ ಮೂಲಕ ಸಾವಿರಾರು ಜನರನ್ನು ಗುಣಮುಖರಾಗಿಸಿ ಅವರ ಬದುಕಿನಲ್ಲಿ ಹೊಸ ಆಶಾಕಿರಣ ತಂದಿರುವುದನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕನ್ನಡ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಇವರ ಆಶ್ರಯದಲ್ಲಿ ರಾಮನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹನುಮಂತ ಗೌಡ ಅವರು ಪ್ರಶಸ್ತಿ ಸ್ವೀಕರಿಸಿದರು. ಹನುಮಂತ ಗೌಡ ಅವರ ಸೇವೆಗೆ ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ.
ಪ್ರಶಸ್ತಿ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದ ಹನುಮಂತ ಗೌಡ ಅವರು, ಮೂರು ತಲೆಮಾರುಗಳಿಗಿಂತ ಹಿಂದಿನಿಂದ ತಮ್ಮ ಕುಟುಂಬದವರು ಪಾರಂಪರಿಕ ವೈದ್ಯಕೀಯ ಪದ್ಧತಿಯಿಂದ ಜನರಿಗೆ ಸೇವೆ ನೀಡುತ್ತಾ ಬಂದಿದ್ದು, ಈ ಪ್ರಶಸ್ತಿ ಹಿರಿಯರ ಸೇವೆಗೆ ಅರ್ಪಿಸುತ್ತೇನೆ. ನಮ್ಮಲ್ಲಿಗೆ ಚಿಕಿತ್ಸೆಗೆ ಬಂದ ಜನ ಗುಣಮುಖರಾಗಿ ಹೋದರೆ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ ಎಂದರು. ಆದಿಚುಂಚನಗಿರಿ ಮಠಾದೀಶ ಅನ್ನದಾನೇಶ್ವರ ಸ್ವಾಮಿಗಳು, ಉಪ ಮುಖ್ಯಮಂತ್ರಿ ಅಶ್ವಥನಾರಾಯಣ, ಶಾಸಕಿ ಅನಿತಾ ಕುಮಾರಸ್ವಾಮಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!