ಹೊಸ ದಿಗಂತ ವರದಿ, ಮಂಗಳೂರು:
ಕರ್ನಾಟಕ ವಿದ್ಯುತ್ಪ್ರಸರಣ ನಿಗಮ (ಕೆಪಿಟಿಸಿಎಲ್) ಬಂಟ್ವಾಳದಲ್ಲಿ ನಿರ್ಮಿಸಲು ಉದ್ದೇಶಿದ್ದ 110 ಕೆ.ವಿ. ಉಪ ಕೇಂದ್ರವನ್ನು ಜಮೀನು ಅಭಿವೃದ್ಧಿಗೆ ರೂ.8 ಕೋಟಿ ವ್ಯಯವಾಗುತ್ತದೆ ಎಂಬ ಕಾರಣ ನೀಡಿ ಕೈಬಿಡಲಾಗಿದೆ. ಕೆಪಿಟಿಸಿಎಲ್ ಅಧಿಕಾರಿಗಳ ಬೇಜವಾಬ್ದಾರಿಯ ವರ್ತನೆಗಳಿಗೆ ಇದೊಂದು ಉತ್ತಮ ಉದಾಹರಣೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಆರೋಪಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ 20 ಅಂಶಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅಲಂಕಾರು 110 ಕೆವಿ ಉಪ ಕೇಂದ್ರಕ್ಕೆ ಸ್ಥಾಪನೆಗೆ ಮಾಡಾವು ಉಪ ಕೇಂದ್ರದಿಂದ 11 ಕಿ.ಮೀ ಉದ್ದದ ತಂತಿಮಾರ್ಗದ ಅಗತ್ಯವಿದೆ.
ಆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸರ್ವೆ ಆಗಬೇಕಿದೆ. ಆದರೆ ಸರ್ವೆಗೆ ರೈತರಿಂದ ಪ್ರತಿರೋಧ ಇದೆ ಎಂಬ ಚರ್ಚೆ ನಡೆಯುತ್ತಿದ ವೇಳೆ ರಾಜೇಶ್ ನಾಕ್ ಬಂಟ್ವಾಳದ ವಿಷಯವನ್ನು ಪ್ರಸ್ತಾಪಿಸಿ ಕೆಪಿಟಿಸಿಎಲ್ ಅಧಿಕಾರಿಗಳು ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದಿಲ್ಲ. ಕಾಮಗಾರಿ ವಿಳಂಬಕ್ಕೆ ಕಾರಣಗಳನ್ನು ಹುಡುಕುವುದರಲ್ಲಿ ತಲ್ಲೀನರಾಗಿದ್ದಾರೆ ಎಂದರು.
65 ಸೆಂಟ್ಸಿಗೆ ರೂ.8ಕೋಟಿ!
ಬಂಟ್ವಾಳ ಉಪ ಕೇಂದ್ರ ಸ್ಥಾಪನೆಗೆ ಕೆಪಿಟಿಸಿಎಲ್ ಅಧಿಕಾರಿಗಳು ೬೫ ಸೆಂಟ್ಸು ಜಮೀನು ಗುರುತಿಸಿ ಅಂತಿಮಗೊಳಿಸಿದ್ದರು. ಅದನ್ನು ತಡವಿಲ್ಲದೆ ಜಾರಿ ಮಾಡುವಂತೆ ನಾನು ಕಡತ ಸಹಿತ ಮುಖ್ಯಮಂತ್ರಿಯವರಲ್ಲಿ ವಿನಂತಿ ಮಾಡಿದ್ದೆ. ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸಿಎಂ ಆದೇಶಿಸಿದ್ದರು. ಜಮೀನು ಅಭಿವೃದ್ಧಿಗೆ ರೂ.8 ಕೋಟಿ ಅಗತ್ಯ ಇದೆ ಎಂದು ಆ ಬಳಿಕ ನೆಪವೊಡ್ಡಿ ಉಪ ಕೇಂದ್ರ ನಿರ್ಮಾಣವನ್ನು ಬದಿಗೆ ಸರಿಸಿದ್ದಾರೆ ಎಂದು ಶಾಸಕರು ಆರೋಪಿಸಿದರು.
65 ಸೆಂಟ್ಸು ಅಭಿವೃದ್ಧಿಗೆ ರೂ.8 ಕೋಟಿ ಯಾಕೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ನಮ್ಮ
ಮುಖ್ಯ ಇಂಜಿನಿಯರ್ ಬಂದು ಸೈಟ್ ಪರಿಶೀಲನೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಸ್ಥಳೀಯ ಕೆಪಿಟಿಸಿಎಲ್ ಅಧಿಕಾರಿ ಸಭೆಗೆ ವಿವರಣೆ ನೀಡಿದರು.
ವಿಳಂಬಕ್ಕೆ ಒತ್ತು: ಮಠಂದೂರು
ಅಲಂಕಾರು ಉಪ ಕೇಂದ್ರ ವಿಳಂಬದಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ಕೊಡಲು ಸಾಧ್ಯ ಆಗುತ್ತಿಲ್ಲ. ೫ ವರ್ಷಗಳಿಂದ ಯೋಜನೆ ಕುಂಟುತ್ತಾ ಇದೆ. ಕೇಪು ಗ್ರಾಮದ ಕುದ್ದುಪದವಿನಲ್ಲಿ ಕೂಡಾ ಇದೇ ಪರಿಸ್ಥಿತಿ ಇದೆ. ಅಲ್ಲೂ ಕಾಮಗಾರಿ ಶುರು ಆಗಿಲ್ಲ. ಕೆಪಿಟಿಸಿಎಲ್ ವಿಳಂಬ ಮಾಡುವಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದೆ ಎಂದು ಶಾಸಕ ಮಠಂದೂರು ಆರೋಪಿಸಿದರು.
ಅಲಂಕಾರು ಯೋಜನೆಗೆ ಸಂಬಂಧ ಪಟ್ಟಂತೆ ಕೆಪಿಟಿಸಿಎಲ್ ಅಧಿಕಾರಿಗಳು ಬದಲಿ ಮಾರ್ಗವನ್ನು ಆಯ್ಕೆ ಮಾಡಿ ಸಮಸ್ಯೆಯನ್ನು ಬಗೆಹರಿಸ ಬಹುದು. ನದಿ ಬದಿಯಲ್ಲಿ ಅಥವಾ ಸರಕಾರಿ ಜಮೀನಿನಲ್ಲಿ ತಂತಿ ಹಾದು ಹೋಗುವಂತೆ ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಮುಂದುವರಿಸಿರಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವಕಾಶ ವಂಚನೆ: ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ, ಯೋಜನೆಯ ಅನುಷ್ಠಾನ ವಿಳಂಬದಿಂದ ರೈತರು ಸಹಿತ ಹಲವರ ಅವಕಾಶಗಳನ್ನು ಕುಂಠಿತಗೊಳಿಸುತ್ತಿದ್ದೇವೆ. ಅದನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು. ಮುಂದಿನ ಸಭೆಯೊಳಗೆ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು ಎಂದು ಅವರು ಆದೇಶಿಸಿದರು.
ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಡಿ.ವೇದವ್ಯಾಸ ಕಾಮತ್, ಕೆ.ಪ್ರತಾಪಸಿಂಹ ನಾಯಕ್, ಎಸ್.ಎಲ್.ಭೋಜೇಗೌಡ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರವೀಂದ್ರ ಕಂಬಳಿ, ಮಮತಾ ಶೆಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.