Wednesday, June 29, 2022

Latest Posts

ಕೋವಿಡ್ ಮಾರ್ಗಸೂಚಿಯಲ್ಲಿ ಕಲ್ಯಾಣ ಮಂದಿರಕ್ಕೆ ರಿಯಾಯಿತಿ ನೀಡುವಂತೆ ಮನವಿ

ಹೊಸದಿಗಂತ ವರದಿ, ಶಿವಮೊಗ್ಗ:

ಜಿಲ್ಲೆಯಲ್ಲಿರುವ ಕಲ್ಯಾಣ ಮಂದಿರಗಳ ಸ್ಥಳಾವಕಾಶವನ್ನು ಪರಿಗಣಿಸಿ ಕೋವಿಡ್ ಮಾರ್ಗಸೂಚಿಯಲ್ಲಿ ರಿಯಾಯಿತಿ ನೀಡುವಂತೆ ಜಿಲ್ಲಾ ಕಲ್ಯಾಣ ಮಂದಿರಗಳ ಸಂಘದಿಂದ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಮಾರ್ಗಸೂಚಿಯಲ್ಲಿ ಕೆಲವು ಅವೈಜ್ಞಾನಿಕ ಅಂಶಗಳಿದ್ದು, ಇವುಗಳಿಂದ ಹಲವು ಉದ್ಯಮಗಳಿಗೆ ಕಂಠಕವಾಗಿವೆ. ಮದುವೆ ಮತ್ತು ಇತರೆ ಶುಭ ಕಾರ್ಯಗಳಿಗೆ 50 ಜನಕ್ಕೆ ಸೀಮಿತಗೊಳಿಸಿದ್ದು, ಲಕ್ಷಾಂತರ ರೂ. ಬಾಡಿಗೆ ನೀಡಿ ಎಲ್ಲಾ ಸಿದ್ಧತೆಗಳನ್ನು ನಡೆಸಿ ಪೂರ್ವ ನಿರ್ಧರಿತ ಆಮಂತ್ರಣವನ್ನು ಈಗಾಗಲೇ ಹಂಚಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಈಗಾಗಲೇ ನಿಗದಿಗೊಳಿಸಿರುವ ಶುಭ ಕಾರ್ಯಗಳಿಗೆ ಸರ್ಕಾರ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡಬೇಕು. ಇಲ್ಲವಾದಲ್ಲಿ ಎಲ್ಲಾ ಕಲ್ಯಾಣ ಮಂದಿಗಳ ಆಡಳಿತ ಮಂಡಳಿಗೆ ಅಪಾರ ನಷ್ಟ ಉಂಟಾಗಲಿದೆ. ಕಾರ್ಯಕ್ರಮ ನಡೆಸಲು ಮುಂಗಡ ಹಣ ನೀಡಿದವರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದು, ಮುಂಗಡ ಹಣವನ್ನು ವಾಪಾಸ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಕೂಡ ಇದೇ ಸಮಸ್ಯೆ ಉದ್ಭವಿಸಿ ಕಲ್ಯಾಣ ಮಂದಿರಗಳು ನಷ್ಟದಲ್ಲಿದ್ದವು. ಈ ಉದ್ಯಮವನ್ನು ಹಲವರು ನಂಬಿಕೊಂಡಿದ್ದಾರೆ. ಅವರಿಗೂ ಜೀವನಕ್ಕೆ ತೊಂದರೆಯಾಗಿದೆ. ಹೆಚ್ಚು ಸ್ಥಳ ಇರುವ ಕಲ್ಯಾಣ ಮಂದಿರಕ್ಕೆ ಹೆಚ್ಚಿನ ಜನ ಸೇರಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
50 ಜನ ಸೀಮಿತಗೊಳಿಸಿದಾಗ ಅನಿವಾರ್ಯ ಕಾರಣದಿಂದ ಕೇವಲ 5 ಜನ ಹೆಚ್ಚು ಇದ್ದರೂ ಕೂಡ ಅಧಿಕಾರಿಗಳು ಮಧ್ಯ ಪ್ರವೇಶಿಸಿ ವಿನಾ ಕಾರಣ ದಂಡ ವಿಧಿಸುತ್ತಿದ್ದಾರೆ. ಇದು ಸರಿಯಲ್ಲ ಬ್ಯೂಟಿ ಪಾರ್ಲರ್ , ಹೇರ್ ಕಟಿಂಗ್ ಸಲೂನ್‌ನಲ್ಲಿ ಕೋವಿಡ್ ಪಸರಿಸುವ ಅವಕಾಶವಿದ್ದರೂ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಕಲ್ಯಾಣ ಮಂದಿರಗಳಿಗೆ ಮಾರ್ಗ ಸೂಚಿಯಲ್ಲಿ ವಿನಾಯತಿ ನೀಡುವಂತೆ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ನಟರಾಜ್ ಭಾಗವತ್, ಶ್ರೀನಾಥ್, ದಿನೇಶ್, ದಂಡಪಾಣಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss