Sunday, April 18, 2021

Latest Posts

ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ ಮುಷ್ಕರ ಕೈಬಿಟ್ಟು ಸಹಕರಿಸಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯ ಸರ್ಕಾರ ಈಗಾಗಲೇ 8 ಬೇಡಿಕೆ ಈಡೇರಿಸಿದ್ದರೂ ಸಹ ಇಂದಿನಿಂದ ರಾಜ್ಯದಾದ್ಯಂತ ಸಾರಿಗೆ ನಿಗಮಗಳ ಬಸ್ ಸಂಚಾರ ಸ್ಥಗಿತಗೊಳಿಸುವ ಮೂಲಕ ಮುಷ್ಕರ ಪ್ರಾರಂಭಿಸಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಾಳೆಯೂ ಮುಷ್ಕರ ಮುಂದುವರೆಸುವ ನಿರ್ಧಾರವನ್ನು ಸಾರಿಗೆ ನೌಕರರ ಒಕ್ಕೂಟದ ಮುಖಂಡರು ಕೈಗೊಂಡಿರುವುದು ದುರ್ದೈವದ ಸಂಗತಿ. ಆದರೆ, ಮುಷ್ಕರದಿಂದ ತೊಂದರೆಯಾಗಬಾರದು ಎಂಬ ಹಿತದೃಷ್ಟಿಯಿಂದ ಸರ್ಕಾರವು ಹಲವು ರೀತಿ ಪರ್ಯಾಯ ವ್ಯವಸ್ಥೆ ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಎಂ, ಈಗಾಗಲೇ ತಿಳಿಸಿರುವಂತೆ ಸಾರಿಗೆ ನೌಕರರ ವೇತನ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಅನುಮತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಈ ಬಗ್ಗೆ ಅನುಮತಿ ನೀಡಿದಲ್ಲಿ, ಈ ಬಗ್ಗೆ ಮುಂದಿನ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವರ ಚಿತಾವಣೆಯಿಂದ ಈ ಮುಷ್ಕರ ಪ್ರಾರಂಭವಾಗಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಈಗಾಗಲೇ ಕೋವಿಡ್ ಸಮಯದಲ್ಲಿ ಸರೆಂಡರ್ ಮಾಡಿದ ಖಾಸಗಿ ನೋಂದಾಯಿತ ಪ್ರಯಾಣಿಕ ವರ್ಗದ ವಾಹನಗಳಿಗೆ ಏಪ್ರಿಲ್ ತಿಂಗಳಿಗೆ ಅನ್ವಯಿಸುವಂತೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.
ಈ ಮುಷ್ಕರದ ಹಿನ್ನೆಲೆ ಸಾರ್ವಜನಿಕರಿಗೆ ಉಂಟಾಗುವ ತೊಂದರೆ ತಪ್ಪಿಸುವ ಸಲುವಾಗಿ ಖಾಸಗಿ ವಾಹನಗಳ ಮುಖಾಂತರ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(3)(ಎಫ್)ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಾರಿಗೆ ಪ್ರಯಾಣಿಕರ ವಾಹನಗಳಿಗೆ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 66(1)ರಂತೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.

ಇಡೀ ರಾಜ್ಯದಲ್ಲಿ ಖಾಸಗಿ ಟ್ಯಾಕ್ಸಿ, ಮಿನಿ ಬಸ್, ಬಸ್ಸುಗಳ ಮಾಲೀಕರ ಸಂಘದೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತೆ ಕೋರಲಾಗಿದೆ.
ಸಾರಿಗೆ ನಿಗಮಗಳ ಬಸ್ ನಿಲ್ದಾಣ ಮತ್ತು ಘಟಕಗಳಲ್ಲಿ ಈ ಖಾಸಗಿ ಬಸ್ಸುಗಳ ನಿಲುಗಡೆಗಾಗಿ ಸ್ಥಳವಕಾಶವನ್ನು ಮತ್ತು ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ಅವಕಾಶ ಒದಗಿಸಲಾಗಿದೆ. (ಆದೇಶ ಸಂ.ಕರಾಸಾ/ಕೇಕ/ಸಂ/ಸಾ/ಜಿ-2/81/21-22 ದಿನಾಂಕ: 06.04.2021)

ದೂರದ ಸ್ಥಳಗಳಿಗೆ ತೆರಳಲಿರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶಗಳಿಂದ ಬೆಂಗಳೂರಿನಿಂದ ಬೆಳಗಾವಿ, ಕಲಬುರಗಿ, ಬೀದರ್, ಕಾರವಾರ, ವಿಜಯಪುರ, ಶಿವಮೊಗ್ಗ, ಮೈಸೂರು ಮುಂತಾದ ಕಡೆಗಳಿಗೆ ಹೆಚ್ಚಿನ ರೈಲು ಸಂಪರ್ಕವನ್ನು ಒದಗಿಸುವಂತೆ ಈಗಾಗಲೇ ರೈಲ್ವೆ ಇಲಾಖೆಯನ್ನು ಸಹ ಕೋರಲಾಗಿದೆ.

ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ರೈಲುಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ಇಂತಹ ಸಂಕಷ್ಟದ ಸಮಯದಲ್ಲಿ ಸಹಕರಿಸಬೇಕೆಂದು ಕೋರಲಾಗಿದೆ.

ನಮ್ಮ ಸಾರಿಗೆ ನಿಗಮಗಳ ನೌಕರರು ಮುಷ್ಕರವನ್ನು ಕೈಬಿಟ್ಟು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಸರ್ಕಾರದ ಪರವಾಗಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss